ಶ್ರೀಃ

ವಿಕ್ರಮಾರ್ಜುನ ವಿಜಯಂ

ಪ್ರಥಮಾಶ್ವಾಸಂ

ಉತ್ಪಲಮಾಲೆ

ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ಧರಿತ್ರಿಯಂಜೀಯೆನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ದಿಯುಮಿಂತುದಾತ್ತ ನಾರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ

ಚಂಪಕಮಾಲೆ

ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಮುಜ್ಜಳ ಜಸಮಂಗಸಂಗತ ಲಸದ್ಭಸಿತಂ ಪ್ರಭುಶಕ್ತಿ ಶಕ್ತಿ ನಿರ್ಮಳಮಣಿಭೂಷಣಂ ಫಣಿವಿಭೂಷಣಮಾಗೆ ನೆಗೞ್ತೆಯಂ ಪುದುಂಗೊಳಿಸಿದನೀಶ್ವರಂ ನೆಗೞ್ದುದಾರ ಮಹೇಶ್ವರನೀಗೆ ಭೋಗಮಂ

ಉತ್ಪಲಮಾಲೆ

ಚಂಡ ವಿರೋಧಿಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀಷಂಡಮರಲ್ದು ರಾಗದಿನೊಱಲ್ದಿರೆ ಯಾಚಕ ಭೃಂಗಕೋಟಿ ಕೈಕೊಂಡು ನಿರಂತರಂ ತಗುಳ್ದು ಕೀರ್ತಿಸೆ ಮಿಕ್ಕೆಸೆವ ಪ್ರಚಂಡ ಮಾರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ

ಚಂಪಕಮಾಲೆ

ಸಹಜದ ಚೆಲ್ವಿನೊಳ್ ರತಿಯ ಸೋಲದ ಕೇಳಿಕೆಯೊಳ್ ಪೊದೞ್ದು ಸನ್ನಿಹಿತವೆನಿಪ್ಪಪೂರ್ವ ಶುಭಲಕ್ಷಣ ದೇಹದೊಳೊಳ್ಪನಾಳ್ದು ಸಂದಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳು

ಚಂಪಕಮಾಲೆ

ಕ್ಷಯಮಣಮಿಲ್ಲ ಕೇೞ್ದು ಕಡೆಗಂಡವನಾವನುಮಿಲ್ಲೆನಲ್ ತದಕ್ಷಯನಿಧಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ

ಚಂಪಕಮಾಲೆ

ತಿಸುಳದೊಳುಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ ಕಣ್ಗಗುರ್ವಿಸುವಿನಮೊಕ್ಕು ನೇಲ್ವ ಕರುಳೋಳಿಯೆ ಬಾಳ (ಲ )ಮೃಣಾಳಮಾಗೆ ಮಿಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯನಾಱಿಸುತಿಂತೆ ತನ್ನ ಕೂರಸಿಯೊಳಡುರ್ತು ಕೊಂದಸಿಯಳಿ(ರ್ಕ)ಸಿಯೊಳ್ ಪಡೆಮೆಚ್ಚೆ ಗಂಡನಾ

ಮಲ್ಲಿಕಾಮಾಲೆ

ಎನ್ನ ದಾನಮಿದಾಗಳುಂ ಮಧುಪಾಶ್ರಯಂ ಧರೆಗವ್ಯವಚ್ಛಿನ್ನ ದಾನಮಿದಾಗಳುಂ ವಿಬುಧಾಶ್ರಯಂ ಗೆಲೆವಂದನೆನನ್ನಿಜೋನ್ನತಿಯಿಂದಮೀ ಪತಿಯೆಂದು ಮೆಚ್ಚಿ ವಿನಾಯಕಂತಾನ್ನಿಮಿರ್ಚುದೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ

ಉತ್ತಮ ಕಾವ್ಯದ ಲಕ್ಷಣಗಳು ಮತ್ತು ಕಾವ್ಯರಚನೆಯ ಉದ್ದೇಶ
ಚಂಪಕಮಾಲೆ

ಬಗೆ ಪೊಸತು ಅಪ್ಪುದಾಗಿ ಮೃದುಬಂಧದೊಳ/ ಳೊದುವುದೊಂದಿ ದೇಸಿಯೊಳ್ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯಬಂಧಮೊಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೊರೆಯಿಂ ಬೞಲ್ದು ತುಂಬಿಗಳಿನೆ ತುಂಬಿ ಕೋಗಿಲೆಯ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್

ಉತ್ಪಲಮಾಲೆ

ಆ ಸಕಳಾರ್ಥ ಸಂಯುತಮಳಂಕೃತಿಯುಕ್ತಮುದಾತ್ತ ವೃತ್ತ್ವಿ ವಿನ್ಯಾಸಮನೇಕ ಲಕ್ಷಣಗುಣಪ್ರಭವಂ ಮೃದುಪಾದಮಾದ ವಾಕ್ಛ್ರೀ ಸುಭಗಂ ಕಳಾಕಳಿತಮೆಂಬ ನೆಗೞ್ತೆಯನಾಳ್ದ ಕಬ್ಬಮಂಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೇ

ಚಂಪಕಮಾಲೆ

ಕವಿಗಳ ನಾಮಧಾರಕ ನರಾಪರೋಳಿಯೊಳೀತನೊಳ್ಳಿದಂಕವಿ ನೃಪನೀತನೊಳ್ಳಿದನೆನಲ್ ದೊರೆಯಲ್ತು ನೆಗೞ್ತೆವೆತ್ತ ಸತ್ಕವಿಗಳ ಷೋಡಶಾವನಿಪರೋಳಿಯೊಳಂ ಕವಿತಾಗುಣಾರ್ಣವಂಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯು ಗುಣಾರ್ಣವಂ

ಚಂಪಕಮಾಲೆ

ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾರತಮನಪೂರ್ವಮಾಗೆ ಸಲೆ ಪೇೞ್ದ ಕವೀಶ್ವರರಿಲ್ಲ ವರ್ಣಕಂಕತೆಯೊಳೊಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ಪಂಡಿತರೆ ತಗುಳ್ದು ಬಿಚ್ಚೞಿಸೆ ಪೇೞಲೊಡರ್ಚಿದೆನೀ ಪ್ರಬಂಧಮಂ

ಚಂಪಕಮಾಲೆ

ಲಲಿತಪದಂ ಪ್ರಸನ್ನ ಕವಿತಾಗುಣಮಿಲ್ಲದೆ ಪೂಣ್ದು ಪೇೞ್ದ ಬೆಳ್ಗಳ ಕೃತಿಬಂಧಮುಂ ಬರೆಪಕಾಱಂ ಕೈಗಳ ಕೇಡು ನುಣ್ಣನಪ್ಪಳಕದ ಕೇಡು ಪೇೞಿಸಿದೊಡರ್ಥದ ಕೇಡೆನೆ ಪೇೞ್ದು ಬೀಗಿ ಪೊಟ್ಟಳಿಸಿ ನೆಗೞ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ

ಕವಿಯ ವಿನಯ
ಉತ್ಪಲಮಾಲೆ

ವ್ಯಾಸಮುನೀಂದ್ರ ರುಂದ್ರ ವಚನಾಮೃತರ್ವಾಯನೀಸುವೆಂ ಕವಿವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳ್ಪು ಮನ್ಮನೋವಾಸಮನೆಯ್ದೆ ಪೇೞ್ದಪೆನದಲ್ಲದೆ ಗರ್ವಮೆ ದೋಷಮೞ್ತಿಗಂದೋಷಮೆ ಕಾಣೆನೆನ್ನಱವ ಮಾೞ್ಕೆಯ ಪೇೞ್ವೆನಿದಾವ ದೋಷಮೋ

ಚಂಪಕಮಾಲೆ

ವಿಪುಳ ಯಶೋವಿತಾನ ಗುಣವಿಲ್ಲದನಂ ಪ್ರಭು ಮಾಡಿ ಪೂರ್ವ ಭೂಮಿಪರ ಪದಂಗಳಂ ಪುಗಿಸಿ ಪೋಲಿಪೊಡೀತನುದಾತ್ತ ಪೂರ್ವ ಭೂಮಿಪರುಮನೊಳ್ಪಿನೊಳ್ ತಗುಳೆವಂದೊಡೆ ಕಥೆಯೊಳ್ ತಗುಳ್ಚಿ ಪೋಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್

ಅರಿಕೇಸರಿರಾಜನ ವಂಶ ವಿವರಣೆ
ಕಂದ

ಶ್ರೀಮಚ್ಚಳುಕ್ಯ ವಂಶವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂಡೀ ಮಹಿಯೊಳಾತ್ಮವಂಶಶಿಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದ

ಕಂದ

ಆತ ನಿಜಭುಜವಿಜಯಖ್ಯಾತಿಯನಾಳ್ದಾಳ್ದನಧಿಕಬಲನವನಿಪತಿವ್ರಾತ ಮಣಿಮಕುಟಕಿರಣದ್ಯೋತಿತಪಾದಂ ಸಪಾದಲಕ್ಷ ಕ್ಷಿತಿಯಂ

ಕಂದ

ಏನಂ ಪೇೞ್ವುದೊ ಸಿರಿಯುದ್ದಾನಿಯನೆಣ್ಣೆಯೊಳೆ ತೀವಿ ದೀರ್ಘಿಕೆಗಳನಂತಾ ನೃಪತಿ ನಿಚ್ಚಲಯ್ನೂಱಾನೆಯನವಗಾಹಮಿರಿಸುವಂ ಬೋದನದೊಳ್

ಕಂದ

ಶ್ರೀಪತಿಗೆ ಯುದ್ಧಮಲ್ಲ ಮಹೀಪತಿಗೆ ನೆಗೞ್ತೆ ಪುಟ್ಟೆ ಪುಟ್ಟಿದನಖಿಳಕ್ಷ್ಮಾಪಾಲ ಮೌಳಿಮಣಿ ಕಿರಣಾಪಾಳಿತ ನಖಮಯೂಖರಂಜಿತ ಚರಣಂ

ಕಂದ

ಅರಿಕೇಸರಿಯೆಂಬಂ ಸುಂದರಾಂಗನತ್ಯಂತ ವಸ್ತುವಂ ಮದಕರಿಯಂಹರಿಯಂ ಪಡಿವಡೆಗುರ್ಚಿದಕರವಾಳನೆ ತೋಱಿ ನೃಪತಿ ಗೆಲ್ಲಂಗೊಂಡಂ

ಕಂದ

ನಿರುಪಮ ದೇವನ ರಾಜ್ಯದೊಳರಿಕೇಸರಿ ವೆಂಗಿವಿಷಯಮಂ ತ್ರಿ ಕಳಿಂಗಂಬೆರಸೊತ್ತಿಕೊಂಡು ಗರ್ವದೆಬರೆಯಿಸಿದಂ ಪೆಸರನಖಿಳ ದಿಗ್ಭಿತ್ತಿಗಳೊಳ್

ಕಂದ

ಕ್ಷತ್ರಂ ತೇಜೋಗುಣಮಾಕ್ಷತ್ರಿಯರೊಳ್ ನೆಲಸಿ ನಿಂದುದಾ ನೆಗೞ್ದಾದಿಕ್ಷತ್ರಿಯರೊಳಮಿಲ್ಲೆನಿಸಿದುದೀ ತ್ರಿಜಗದೊಳೆಸಗಿದೆಸಕಮರಿಕೇಸರಿಯಾ

ಕಂದ

ಅರಿಕೇಸರಿಗಾತ್ಮಜರರಿನರಪ ಶಿರೋದಳನ ಪರಿಣತೋಗ್ರಾಸಿ ಭಯಂಕರಕರರಾಯಿರ್ವರೊಳಾರ್ದೊರೆಯೆನೆ ನರಸಿಂಹ ಭದ್ರದೇವರ್ ನೆಗೞ್ದರ್

ಕಂದ

ಅವರೊಳ್ ನರಸಿಂಗಂಗತಿಧವಳಯಶಂ ಯುದ್ಧಮಲ್ಲನಗ್ರಸುತಂ ತದ್ಭುವನ ಪ್ರದೀಪನಾಗಿರ್ದವಾರ್ಯವೀರ್ಯಂಗೆ ಬದ್ದೆಗಂ ಪಿರಿಯ ಮಗಂ

ಕಂದ

ಪುಟ್ಟಿದೊಡಾತನೊಳಱವೊಡವುಟ್ಟಿದುದಱವಿಂಗೆ ಪೆಂಪು ಪೆಂಪಿನೊಳಾಯಂಕಟ್ಟಾಯದೊಳಳವಳವಿನೊಳೊಟ್ಟಜೆ ಪುಟ್ಟಿದುದು ಪೋಲ್ವರಾರ್ ಬದ್ದೆಗನಂ

ಕಂದ

ಬಲ್ವರಿಕೆಯೊಳರಿನೃಪರ ಪಡಲ್ವಡೆ ತಳ್ತಿಱಿದು ರಣದೊಳಾ ವಿಕ್ರಮಮಂಸೊಲ್ವಿನಮಾವರ್ಜಿಸಿದಂನಾಲ್ವತ್ತೆರಡಱಿಕೆಗಾಳೆಗಂಗಳೊಳೀತಂ

ಚಂಪಕಮಾಲೆ

ವನಪರೀತ ಭೂತಳದೊಳೀತನೆ ಸೋಲದ ಗಂಡನೆಂಬ ಪೆಂಪಿನ ಪೆಸರಂ ನಿಮಿರ್ಚಿದುದುಮಲ್ಲದೆ ವಿಕ್ರಮದಿಂದೆ ನಿಂದಗುರ್ವೆನಲಿಱಿದಾಂತರಂ ಮೊಸಳೆಯಂ ಪಿಡಿವಂತಿರೆ ನೀರೊಳೊತ್ತಿ ಭೀಮನನತಿಗರ್ವದಿಂ ಪಿಡಿಯೆ ಮೆಯ್ಗಲಿ ಬದ್ದೆಗನನ್ನನಾವನೋ

ಮತ್ತೇಭವಿಕ್ರೀಡಿತ

ಮುಗಿಲಂ ಮುಟ್ಟಿದ ಪೆಂಪು ಪೆಂಪನೊಳಕೊಂಡುದ್ಯೋಗಮುದ್ಯೋಗದೊಳ್ನೆಗೞ್ದಾಜ್ಞಾಫಲಮಾಜ್ಞೆಯೊಳ್ ತೊಡರ್ದಗುರ್ವೊಂದೊಂದಗುರ್ವಿಂದಗುರ್ವುಗೊಳುತ್ತಿರ್ಪರಿಮಂಡಳಂ ಜಸಕಡರ್ಪಪ್ಪನ್ನೆಗಂ ಸಂದನೀಜಗದೊಳ್ ಬದ್ದೆಗನನ್ನನಾವನಿೞಿಕುಂ ಭ್ರೂಕೋಟಿಯಂ ಕೋಟಿಯಂ

ಭದ್ರದೇವನ ಮಗ
ಕಂದ

ಮೇರುವ ಪೊನ್ ಕಲ್ಪಾಂಘ್ರಿಪದಾರವೆ ರಸದೊಱವು ಪರುಸವೇದಿಯ ಕಣಿ ಭಂಡಾರದೊಳುಂಟೆನೆ ಕುಡುವ ನಿವಾರಿತ ದಾನಕ್ಕೆ ಪೋಲ್ವರಾರ್ ಬದ್ದೆಗನಂ

ತರಳ

ಸುರಭಿ ದೇವತೆಯೆಂಬ ಕಾಪಿನೆ ಮಾಣ್ದುದೇಱುವುದೊಂದೆಂದಿರದೆ ಮಾಣ್ದುದು ದೇವ ವಾರಣವೇೞೆ ಉಂಟವು ಪೋದೊಡಾಖರಕರಂಗರಿದೆಂದೆ ಮಾಣ್ದಿರೆ ಮಾಣ್ದುವಾ ಹರಿ ನೀನೆ ಪೇೞರಿಯವೆಂದಿವು ಭದ್ರದೇವರ ಚಾಗದೊಳ್ಪೊಱಗಾದುವೇ

ಭದ್ರದೇವನ ಮಗ ಯುದ್ಧಮಲ್ಲ ನರಸಿಂಹ
ಕಂದ

ಆ ಬದ್ದೆಗಂಗೆ ವೈರಿತಮೋಬಳ ದಶಶತಕರಂ ವಿರಾಜಿತ ವಿಜಯಶ್ರೀ ಬಾಹು ಯುದ್ಧಮಲ್ಲನಿಳಾ ಬಹು ವಿಧರಕ್ಷಣ ಪ್ರವೀಣ ಕೃಪಾಣಂ

ಕಂದ

ಆತ್ಮಭವನಾನರಾಧಿಪನಾತ್ಮಜನಾ ನಹುಷ ಪೃಥು ಭಗೀರಥ ನಳ ಮಾಹಾತ್ಮರನಿೞಿಸಿ ನೆಗೞ್ದ ಮಹಾತ್ಮಂ ನರಸಿಂಹನಱಿವಿನೊಳ್ ಪರಮಾತ್ಮಂ

ಕಂದ

ಮಾಂಕರಿಸದಱಿವು ಗುರು ವಚನಾಂಕುಶಮಂ ಪಾೞಿಯೆಡೆಗೆ ಪೊಣರ್ದರಿಬಲಮಂಕಿಂಕೊಳೆ ಮಾೞ್ಪೆಡೆಗಣಮೆ ನಿರಂಕುಶಮೆನಿಸಿದುದು ಮುನಿಸು ಭದ್ರಾಂಕುಶನಾ

ಕಂದ

ತಱಿಸಂದು ಲಾೞರೊಳ್ ತಳ್ತಿಱಿದೇಱಂ ಪೇೞೆ ಕೇಳ್ದು ಮಂಡಲಮಿನ್ನುಂತಿಱುನೀರಿಕ್ಕುವುದೆನಿಸಿದತಱಿಸಲವಿನ ಚಲದ ಬಲದ ಕಲಿ ನರಸಿಂಹಂ

ಕಂದ

ಸಿಂಗಂ ಮಸಗಿದವೋಲ್ ನರಸಿಂಗಂ ತಳ್ತಿಱಿಯೆ ನೆಗೞ್ದ ನೆತ್ತರ್ ನಭದೊಳ್ಕೆಂಗುಡಿ ಕವಿದಂತಾದುದಿದೇಂ ಗರ್ವದ ಪೆಂಪೊ ಸಕಲಲೋಕಾಶ್ರಯನಾ

ಕಂದ

ಏೞುಂ ಮಾಳಮುಮಂ ಪಾೞೇೞೆ ತಗುಳಿಱಿದು ನರಗನುರಿಪಿದೊಡೆ ಕರಿಂಕೇೞಸಿದಾತನ ತೇಜದಬೀೞಲನನುಕರಿಪುವಾದುವೊಗೆದುರಿವುರಿಗಳ್

ಕಂದ

ವಿಜಯಾರಂಭ ಪುರಸ್ಸರವಿಜಯಗಜಂಗಳನೆ ಪಿಡಿದು ಘೂರ್ಜರ ರಾಜಧ್ವಜಿನಿಯನಿಱಿದೋಡಿಸಿ ಭುಜವಿಜಯದೆ ವಿಜಯನುಮನಿೞಿಸಿದಂ ನರಸಿಂಹಂ

ಕಂದ

ಸಿಡಿಲವೊಲೆಱಗುವ ನರಗನಪಡೆಗಗಿದುಮ್ಮಳದಿನುಂಡೆಡೆಯೊಳುಣ್ಣದೆಯುಂಕೆಡೆದೆಡೆಯೊಳ್ ಕೆಡೆಯದೆ ನಿಂದೆಡೆಯೊಳ್ ನಿಲ್ಲದೆಯುಮೋಡಿದಂ ಮಹಿಪಾಲಂ

ಕಂದ

ಗಂಗಾವಾರ್ಧಿಯೊಳಾತ್ಮತುರಂಗಮುಮಂ ಮಿಸಿಸಿ ನೆಗೞ್ದ ಡಾಳಪ್ರಿಯನೊಳ್ಸಂಗತ ಗುಣನಸಿಲತೆಯನಸುಂಗೊಳೆ ಭುಜವಿಜಯಗರ್ವದಿಂ ಸ್ಥಾಪಿಸಿದಂ

ಕಂದ

ಆ ನರಸಿಂಹಮಹೀಶ ಮನೋನಯನಪ್ರಿಯೆ ವಿಳೋಳನೀಳಾಳಕೆ ಚಂದ್ರಾನನೆ ಜಾಕವ್ವೆ ದಲಾಜಾನಕಿಗಗ್ಗಳಮೆ ಕುಲದೊಳಂ ಶೀಲದೊಳಂ

ಕಂದ

ಪೊಸತಲರ್ದ ಬಿಳಿಯ ತಾವರೆಯೆಸೞ್ಗಳ ನಡುವಿರ್ಪ ಸಿರಿಯುಮಾಕೆಯ ಕೆಲದೊಳ್ನಸು ಮಸುಳ್ದು ತೋರ್ಪಳೆನೆ ಪೋಲಿಸುವೊಡೆ ಜಾಕವ್ವೆಗುೞದ ಪೆಂಡಿರ್ ದೊರೆಯೇ

ಕಂದ

ಆ ಜಾಕವ್ವೆಗಮಾ ವಸುಧಾ ಜಯ ಸದ್ವಲ್ಲಭಂಗಮತಿ ವಿಶದ ಯಶೋರಾಜಿತನೆನಿಪರಿಕೇಸರಿರಾಜಂ ತೇಜೋಗ್ನಿಮಗ್ನ ರಿಪು ನೃಪಶಲಭಂ

ಕಂದ

ಮಗನಾದನಾಗಿ ಚಾಗದನೆಗೞ್ತೆಯೊಳ್ ಬೀರದೇೞ್ಗೆಯೊಳ್ ನೆಗೞೆ ಮಗಂಮಗನೆನೆ ಪುಟ್ಟಲೊಡಂ ಕೋೞ್ಮೊಗಗೊಂಡುದು ಭುವನಭವನಮರಿಕೇಸರಿಯೊಳ್

ಇಮ್ಮಡಿ ಅರಿಕೇಸರಿ
ತರಳ

ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚುನೀರ್ದಳಿದಾಗಳಾಮದಗಜಾಂಕುಶದಿಂದೆ ಪೆರ್ಚಿಸಿ ನಾಭಿಯಂ ಮದದಂತಿ ದಂತದೊಳೆ ಕಟ್ಟಿದ ತೊಟ್ಟಿಲಂ ನಯದಿಂದಮೇಱಿಸೆ ಬಾಳಕಾಲದೊಳೆ ತೊಟ್ಟಿಲಿಗಂ ಗಜಪ್ರಿಯನಪ್ಪುದಂ ಸಲೆ ತೋಱಿದಂ

ಕಂದ

ರುಂದ್ರಾಂಭೋಧಿ ಪರೀತ ಮಹೀಂದ್ರರದಾರಿನ್ನರೀ ನರೇಂದ್ರಂ ಸಾಕ್ಷಾದಿಂದ್ರಂ ತಾನೆನೆ ಸಲೆ ನೆಗೞ್ದಿಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ

ಕಂದ

ಅಮಿತಮತಿ ಗುಣದಿನತಿ ವಿಕ್ರಮಗುಣದಿಂ ಶಾಸ್ತ್ರಪಾರಮುಂ ರಿಪುಬಳ ಪಾರಮುಮೊಡನೆ ಸಂದುವೆನಿಸಿದನಮೇಯ ಬಲಶಾಲಿ ಮನುಜ ಮಾರ್ತಾಂಡ ನೃಪಂ

ಕಂದ

ಉಡೆವಣಿ ಪಱಯದ ಮುನ್ನಮೆತೊಡಗಿ ಚಲಂ ನೆಗೞೆ ರಿಪುಬಲಂಗಳನೆ ಪಡಲ್ವಡಿಸಿ ಪರಬಲದ ನೆತ್ತರಕಡಲೊಳಗಣ ಜಿಗುಳೆ ಬಳೆವ ತೆಱದೊಳೆ ಬಳೆದಂ

ಕಂದ

ಮೇಲೆೞ್ದ ಬಲಂ ಕೋಟಿಗೆಮೇಲಪ್ಪೊಡಮನ್ಯವನಿತೆ ನೆಗೞ್ದೂರ್ವಶಿಗಂಮೇಲಪ್ಪೊಡಮಕ್ಕೆಂದುಂಸೋಲವು ಕಣ್ ಪರಬಲಾಬ್ಧಿಗಂ ಪರವಧುಗಂ

ಕಂದ

ಧುರದೊಳ್ ಮೂಱುಂ ಲೋಕಂನೆರೆದಿರೆಯುಂ ಕುಡುವ ಪೋೞ್ತರೊಳ್ ಮೇರುವೆ ಮುಂದಿರೆಯುಂ ಬೀರದ ಬಿಯದಂತರಕ್ಕೆ ಕಿಱಿದೆಂದು ಚಿಂತಿಪಂ ಪ್ರಿಯಗಳ್ಳಂ

ಕಂದ

ಸಮನೆನಿಸುವರ್ ಪ್ರಶಸ್ತಿಕ್ರಮದೊಳ್ ಸ್ವಸ್ತಿ ಸಮಗತ (ಸಮಧಿಗತ) ಪಂಚಮಹಾ ಶಬ್ದ ಮಹಾ ಸಾಮಂತರೆನಲ್ಸಮನೆನಿಪರೆ ಗುಣದೊಳರಿಗನೊಳ್ ಸಾಮಂತರ್

ಉತ್ಪಲಮಾಲೆ

ಚಾಗದ ಕಂಬಮಂ ನಿಱಿಸಿ ಬೀರದ ಶಾಸನಮಂ ನೆಗೞ್ಚಿ ಕೋಳ್ಪೋಗದ ಮಂಡಲಂಗಳನೆ ಕೊಂಡು ಜಗತ್ತ್ರಿತಯಂಗಳೊಳ್ ಜಸಕ್ಕಾಗರಮಾದ ಬದ್ದೆಗನಿನಾ ನರಸಿಂಹನಿನತ್ತ ನಾಲ್ವೆರಲ್ಮೇಗು ಪೊದೞ್ದ ಚಾಗದೊಳಮೊಂದಿದ ಬೀರದೊಳಂ ಗುಣಾರ್ಣವಂ

ಕವಿಯ ಕಥಾನೀತಿ ನಿರೂಪಣೆ
ಮಹಾ ಸ್ರಗ್ಧರೆ

ಎನೆ ಸಂದುಂ ವೀರವೈರಿಕ್ಷಿತಿಪಗಜಘಟಾಟೋಪಕುಂಭಸ್ಥಳೀಳೇದನನುಗ್ರೋದ್ಘಾಸಿ ಭಾಸ್ವದ್ಭುಜಪರಿಘನನಾರೂಢಸರ್ವಜ್ಞನಂ ವೈರಿ ನರೇಂದ್ರೋದ್ಧಾಮ ದರ್ಪೋದ್ದಳನನನೆ ಕಥಾನಾಯಕಂ ಮಾಡಿ ಸಂದರ್ಜುನನೊಳ್ ಪೋಲ್ವೀ ಕಥಾಭಿತ್ತಿಯನನುನಯದಿಂ ಪೇೞಲೆಂದೆತ್ತಿಕೊಂಡೆಂ

ಭಾರತ ಕಥಾರಂಭ
ವಚನ

ಅದೆಂತೆನೆ-ಸಮುನ್ಮಿಷ ರತ್ನಮಾಲಾ ಪ್ರಭಾಭಿದರುಣ ಜಲಪ್ಲವಾವಿಳ ವಿಳೋಳವೀಚೀರಯ ಪ್ರದಾರಿತ ;ಕುಳಾಚಲೋದಧಿಪರೀತಮಾಗಿರ್ದ ಜಂಬೂದ್ವೀಪದೊಳಗುಂಟು ನಾಡು ಕುರುಜಾಂಗಣನಾಮದಿಂ ಅಂತಾ ಕುರುಜಾಂಗಣ ವಿಷಯದೊಳ್-

ಕುರುಜಾಂಗಣ ದೇಶದ ವರ್ಣನೆ
ಚಂಪಕಮಾಲೆ

ಜಲಜಲನೊೞ್ಕುತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೈದಿಲ ಪೊಸವೂ ಪೊದೞ್ದ ಪೊಸ ನೈದಿಲ ಕಂಪನೆ ಬೀಱಿ ಕಾಯ್ತಂ ಕೆಂಗೊಲೆಯೊಳೆ ಜೋಲ್ವ ಶಾಳಿ ನವಶಾಳಿಗೆ ಪಾಯ್ವ ಶುಕಾಳಿ ತೋರೆ ಕೆಯ್ವೊಲಗಳಿನೊಪ್ಪಿ ತೋಱಿ ಸಿರಿ ನೋಡುಗುಮಾ ವಿಷಯಾಂತರಾಳದೊಳ್

ಚಂಪಕಮಾಲೆ

ಬೆಳೆದೊಱಗಿರ್ದ ಕೆಯ್ವೊಲನೆ ಕೆಯ್ವೊಲನಂ ಬಳಸಿರ್ದ ಪೂತ ಪೂಗೊಳಗಳೆ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾವಳಿಗಳೆ ನಂದನಾವಳಿಗಳಂ ಬಳಸಿರ್ದ ಮದಾಳಿ ಸಂಕುಲಂಗಳೆ ವಿಷಯಾಂಗನಾಲುಳಿತ ಕುಂತಳದಂತೆವೊಲೊಪ್ಪಿ ತೋಱುಗುಂ

ಚಂಪಕಮಾಲೆ

ಲಳಿತ ವಿಚಿತ್ರ ಪತ್ರ ಫಲ ಪುಷ್ಪಯುತಾಟವಿ ಸೊರ್ಕಿದಾನೆಯಂಬೆಳೆವುದು ದೇವಮಾತೃಕಮೆನಿಪ್ಪ ಪೊಲಂ ನವಗಂಧಶಾಳಿಯಂಬೆಳೆವುದು ರಮ್ಯ ನಂದನ ವನಾಳಿ ವಿಯೋಗಿಜನಕ್ಕೆ ಬೇಟಮಂಬಳೆವುದು ನಾಡ ಕಾಡ ಬೆಳಸಿಂಬೆಳಸಾ ವಿಷಯಾಂತರಾಳದೊಳ್

ಕಂದ

ಆವಲರುಂ ಪಣ್ಣುಂ ಬೀತೋವವು ಗಡ ಬೀಯವಲ್ಲಿ ಮಲ್ಲಿಗೆಗಳುಮಿಮ್ಯಾವುಗಳುಮೆಂದೊಡಿನ್ ಪೆಱತಾವುದು ಸಂಸಾರ ಸಾರಸರ್ವಸ್ವ ಫಲಂ

ಕಂದ

ಮಿಡಿದೊಡೆ ತನಿಗರ್ವು ರಸಂಬಿಡುವುವು ಬಿರಿದೊಂದು ಮುಗುಳ ಕಂಪಿನೊಳೆ ಮೊಗಂಗಿಡುವುವು ತುಂಬಿಗಳೞ್ಕಮೆವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್

ಕಂದ

ಸುತ್ತಿಱಿದ ರಸದ ತೊಱೆಗಳೆಮುತ್ತಿನ ಮಾಣಿಕದ ಪಲವುಮಾಗರಮೆ ಮದೋನ್ಮತ್ತ ಮದಕರಿ ವನಂಗಳೆಸುತ್ತಲುಮಾ ನೆಲದ ಸಿರಿಯನೇನಂ ಪೊಗೞ್ವೆಂ

ವಚನ

ಅಂತು ಸೊಗಯಿಸುವ ಕುರುಜಾಂಗಣ ವಿಷಯ(ದೇಶ)ಕ್ಕೆ ರಾಜದ್ರಾಜಧಾನಿಯಾಗಿರ್ದು (ರಾಜತ್ -ಪ್ರಕಾಶಮಾನವಾದ ರಾಜಧಾನಿ) ಹರಜಟಾಜೂಟಕ್ಕೆ ಚಂದ್ರಲೇಖೆಯಿರ್ಪಂತೆ ದಿಕ್ಕರಿಕಟತಟಕ್ಕೆ ಮದಲೇಖೆಯಿರ್ಪಂತೆ ಕೈಟಭಾರಾತಿಯ ವಿಶಾಲೋರಸ್ಥಳಕ್ಕೆ ಕೌಸ್ತುಭಮಿರ್ಪಂತೆ ಸೊಗಯಿಸುತಿರ್ದುದು ಹಸ್ತಿನಪುರ ಮೆಂಬುದು ಪೊೞಲಲ್ಲಿ-

ರಗಳೆ

ಅದರ ಪೊಱವೊೞಲ ವಿಶಾಲ ಕನಕ ಕೃತಕ ಗಿರಿಗಳಿಂ ಫಳಪ್ರಕೀರ್ಣತರುಗಳಿಂನನೆಯ ಕೊನೆಯ ತಳಿರ ಮುಗುಳ ವನಲತಾನಿಕುಂಜದಿಂ ಪ್ರಸೂನ ರಜದ ಪುಂಜದಿಂಗಗನತಳಮೆ ಪಱಿದು ಬಿೞ್ದುದೆನಿಪ ಬಹುತಟಾಕದಿಂ ಕುಕಿಲ್ವ ನಲಿವ ಕೋಕದಿಂಸುರಿವ ಸುರಿಯಿಯಲರ ಮುಗುಳ್ಗೆ ಮೊಗಸಿದಳಿಕುಳಂಗಳಿಂ ತೊದಲ್ವ ಶಿಶು ಶಕುಂಗಳಿಂತೆಗೆಯೆ ಬೀರರವದೆ ಮೇಲೆ ಪರಿವ ಮದಗಜಗಳಿಂ ಚಳತ್ತುರಂಗಮಂಗಳಿಂಲವಣ ಜಳ ಬಳಸಿದಂತೆ ಬಳಸಿದಗೞ ನೀಳದಿಂದುದಗ್ರ ಕನಕಶಾಳದಿಂದೊಳಗೆ ಕುಲನಗಂಗಳೆನಿಪ ದೇವಕುಲದ ಭೋಗದಿಂ ಸರಾಗಮಾದ ರಾಗದಿಂದಿವಮನೇಳಿಪಂತು ಮಿಳಿರ್ವ ವಿವಿಧ ಕೇತನಂಗಳಿಂ ಸದಾನಿಕೇತನಂಗಳಿಂಧನದ ಭವನಮೆನಿಪ ಸಿರಿಯ ಬಚ್ಚರಾಪಣಂಗಳಿಂ ಪೊದೞ್ದ ಕಾವಣಂಗಳಿಂವಿಟಜನಕ್ಕೆ ತೊಡರ್ವ ಚಾರಿಯೆನಿಪ ಸೂಳೆಗೇರಿಯಿಂ ವಿದಗ್ಧ ಹೃದಯಹಾರಿಯಿಂಕನಕ ಗೋಪುರಂಗಳೊಳಗಣೆರಡು ದೆಸೆಯ ಗುಣಣೆಯಿಂ ವಿಳಾಸಿನಿಯರ ಗಡಣೆಯಿಂಸುರತಸುಖದ ಬಳ್ಳವಳ್ಳಿಯೆನಿಪ ಬಳ್ಳಿಮಾಡದಿಂ ಮಹಾ ವಿನೋದನೀಡದಿಂಕನಕಶೈಲಮೆನಿಸಿ ನೆಗೞ್ದ ಭೂಮಿಪಾಲಭವನದಿಂ ಸಮಸ್ತ ವಸ್ತುಭುವನದಿಂ

ವಚನ

ಅಂತು ಮೂಱುಲೋಕದ ಚೆಲ್ವೆಲ್ಲಮಂ ವಿಧಾತ್ರನೊಂದೆಡೆಗೆ ತೆರಳ್ಪಿದಂತೆ ಸಮಸ್ತವಸ್ತುವಿಸ್ತಾರಹಾರಮಾಗಿರ್ದ ಹಸ್ತಿನಪುರವೆ ನಿಜವಂಶಾವಳಂಬಮಾಗೆ ನೆಗೞ್ದ ಭರತಕುಲತಿಲಕರ ವಂಶಾವತಾರಮೆಂತಾದುದೆಂದೊಡೆ-

ಕುರುವಂಶ ವಿವರ
ಕಂದ

ಜಳರುಹನಾಭನ ನಾಭಿಯಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋಲ್ಲುಳಿತಾಳಿ ಜಲಜಮಾಯ್ತಾಜಳಜದೊಳೊಗೆದಂ ಹಿರಣ್ಯಗರ್ಭ ಬ್ರಹ್ಮಂ

ಕಂದ

ಕಮಲೋದ್ಭವನಮಳಿನ ಹೃತ್ಕಮಲದೊಳೊಗೆದರ್ ಸುರೇಂದ್ರ ಧಾರಕರಾವಾಗಮಳರ್ ನೆಗೞ್ದಿರ್ದರ್ ಪುಲಹ ಮರೀಚ್ಯತ್ರ್ಯಂಗಿರ ಪುಳಸ್ತ್ಯ ಕ್ರತುಗಳ್

ವಚನ

ಅಂತು ಹಿರಣ್ಯಗರ್ಭ ಬ್ರಹ್ಮ ಮನಸ್ಸಂಭವದೊಳ್ ಪುಟ್ಟಿದಱುವರ್ಮಕ್ಕಳೊಳಗೆ ಮರೀಚಿಯ ಮಗಂ ಕಶ್ಯಪನನೇಕ ಭುವನೋತ್ಪತ್ತಿ ನಾಟಕಕ್ಕೆ ಸೂತ್ರಧಾರನಾದನಾತನ ಮಗನವಾರ್ಯವೀರ್ಯಂ ಸೂರ್ಯನಾತನಿಂದವ್ಯವಚ್ಛಿನ್ನಮಾಗಿ ಬಂದಂ ವಂಶ ಸೂರ್ಯವಂಶಮೆಂಬುದಾಯ್ತು-

ಕಂದ

ಅತ್ರಿಯ ಪಿರಿಯ ಮಗಂ ಭುವನತ್ರಯ ಸಂಗೀತ ಕೀರ್ತಿ ಸೋಮಂ ಸಕಲಕ್ಷತ್ರಕುಲಪೂಜ್ಯನಮಳ ಚರಿತ್ರಂ ಪ್ರೋದ್ದಾಮ ಸೋಮವಂಶಲಲಾಮಂ

ಕಂದ

ಆ ಸೋಮವಂಶಜರ್ ಪಲರಾಸುಕರಂಬೆರಸು ನೆಗೞ್ದ ಜಸದಿಂ ಜಗಮಂಬಾಸಣಿಸಿ ಪೋದೊಡೆ ಅಕ ವಿಳಾಸಂ ದೌಷ್ಯಂತಿ ಭರತನೆಂಬಂ ನೆಗೞ್ದಂ

ಕಂದ

ಚಾರುಚರಿತ್ರಂ ಭರತನಪಾರಗುಣಂ ತನ್ನ ಪೆಸರೊಳಮರ್ದೆಸೆಯೆ ಯಶೋಭಾರಂ ಕುಲಮುಂ ಕಥೆಯುಂಭಾರತಮೆನೆ ನೆಗೞ್ದನಂತು ನೆಗೞ್ವುದು ಭೂಪರ್

ಕಂದ

ಭರತನನೇಕಾಧ್ವರ ಭರನಿರತಂ ಜಸಮುೞಿಯೆ ಕೞಿಯೆ ಭೂಪರ್ ಪಲರಾದರಿಸಿದ ಧರಣೀಭರಮಂಧರಿಯಿಸಿದಂ ಪ್ರತಿಮನೆಂಬನಪ್ರತಿಮಬಲಂ

ಕಂದ

ಅಂತಾ ಪ್ರತಿಮಂಗೆ ಸುತರ್ಶಂತನು ಬಾಹ್ಲಿಕ ವಿನೂತ ದೇವಾಪಿಗಳೋರಂತೆ ಧರೆ ಪೊಗೞೆ ನೆಗೞ್ದರನಂತ ಬಳರ್ ಪರಬಳ ಪ್ರಭೇದನ ಶೌರ್ಯರ್

ವಚನ

ಅವರೊಳಗೆ ದೇವಾಪಿ ನವಯೌವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದಂ ಪ್ರತಿಮನುಂ ಪ್ರತಾಪಪ್ರಸರಪ್ರಕಟ ಪಟುವಾಗಿ ಪಲವುಕಾಲಮರಸುಗೆಯ್ದು ಸಂಸಾರಾಸಾರತೆಗೆ ಪೇಸಿ ತಪೋವನಕ್ಕಭಿಮುಖನಾಗಲ್ಬಗೆದು-

ಕಂದ

ಕಂತು ಶರ ಭವನನಾ ಪ್ರಿಯಕಾಂತಾ ಭ್ರೂವಿಭ್ರಮ ಗೃಹಾಗ್ರಹವಶದಿಂಭ್ರಾಂತಿಸದುಪಶಾಂತಮನಂಶಂತನುಗಿತ್ತಂ ಸಮಸ್ತ ರಾಜ್ಯಶ್ರೀಯಂ

ಕಂದ

ಶಂತನುಗಮಮಳ ಗಂಗಾಕಾಂತೆಗಮೆಂಟನೆಯ ವಸು ವಸಿಷ್ಠನ ಶಾಪಭ್ರಾಂತಿಯೊಳೆ ಬಂದು ನಿರ್ಜಿತಕಂತುವೆನಲ್ಕಂತು ಪುಟ್ಟಿದಂ ಗಾಂಗೇಯಂ

ವಚನ

ಅಂತು ಭುವನಕ್ಕೆಲ್ಲಮಾಯಮುಮಳವುಮಱವುಮಣ್ಮುಂ ಪುಟ್ಟುವಂತೆ ಪುಟ್ಟಿ ನವಯೌವನಂ ನೆರೆಯೆ ನೆಯೆ-

ಶಾರ್ದೂಲವಿಕ್ರೀಡಿತ

ಸೌಲಪ್ರಾಂಶು ವಿಶಾಲಲೋಲನಯನಂ ಪ್ರೋದ್ಯದ್ವೃಷಸ್ಕಂಧನುನ್ಮೀಲತ್ಪಂಕಜವಕ್ತ್ರನಾಯತ ಸಮಗ್ರೋರಸ್ಥಳಂ ದೀರ್ಘ ಬಾಹಾಲಂಬಂ ಭುಜವೀರ್ಯವಿಕ್ರಮಯುತಂ ಗಂಗಾತ್ಮಜನ್ಮಂ ಜಯಶ್ರೀಲೋಲಂ ಜಮದಗ್ನಿರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ

ವಚನ

ಅಂತು ಕಲ್ತು ಮುನ್ನಮೆ ಚಾಪವಿದ್ಯೆಯೊಳಾರಿಂದಮೀತನೆ ಭಾರ್ಗವನೆನಿಸಿದ ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜ ಕಂಠಿಕಾಪರಿಕಲಿತ ಕಂಠಲುಂಠನುಮಾಗಿ ಪ್ರಮಾಣನಿಜಭುಜದಂಡದಂಡಿತಾರಾತಿಮಂಡಲನುಮಾಗಿ ಗಾಂಗೇಯಂ ಸುಖದೊಳರಸು ಗೆಯ್ಯುತ್ತಿರ್ಪ ನ್ನೆಗಮಿತ್ತ ಗಂಗಾದೇಶದೊಳುಪರಿಚರವಸುವೆಂಬರಸಂ ಮುಕ್ತಾವತಿಯೆಂಬ ತೊರೆಯೊಳ್ ವಿಶ್ರಮಿಸಿರ್ದೊಡೆ ಕೋಳಾಹಳಮೆಂಬ ಪರ್ವತಕ್ಕೆ ಪುಟ್ಟಿದ ಗಿರಿಜೆಯೆಂಬ ಕನ್ನೆಯನಾತಂ ಕಂಡು ಕಣ್ಬೇಟಂಗೊಂಡು ಮದುವೆಯಂ ನಿಂದೊಂದು ದಿವಸಮಿಂದ್ರನೋಲಗಕ್ಕೆ ಪೋಗಿ ಋತುಕಾಲಪ್ರಾಪ್ತೆಯಾಗಿರ್ದ ನಲ್ಲಳಲ್ಲಿಗೆ ಬರಲ್ ಪಡೆಯದಾಕೆಯಂ ನೆನೆದಿಂದ್ರಿಯ ಕ್ಷರಣೆಯಾದೊಡದನೊಂದು ಕದಳೀಪತ್ರದೊಳ್ ಪುದಿದು ತನ್ನ ನಡಪಿದ ಗಿಳಿಯ ಕೈಯೊಳೋಪಳಲ್ಲಿಗಟ್ಟಿದೊಡದಂ ತರ್ಪರಗಿಳಿಯನೊಂದು ಗಿಡುಗನೆಡೆಗೊಂಡು ಜಗುನೆಯಂ ಪಾಯ್ವಾಗಳುಗಿಬಗಿ ಮಾಡಿದಾಗಳದಱ ಕೈಯಿಂ ಬರ್ದುಂಕಿ ತೊರೆಯೊಳಗೆ ಬಿೞ್ದೊಡದನೊಂದು ಬಾಳೆವಿನ್ನುಂಗಿ ಗರ್ಭಮಂ ತಾಳ್ದಿದೊಡೊಂದು ದಿವಸಮಾ ಮೀನನೊರ್ವ ಜಾಲಗಾಱಂ ಜಾಲದೊಳ್ ಪಿಡಿದಲ್ಲಿಗರಸಪ್ಪ ದಾಶನಲ್ಲಿಗುಯ್ದು ತೋಱಿದೊಡದಂ ವಿದಾರಿಸಿ ನೋೞ್ಪನ್ನೆಗಂ ಬಾಳೆಯ ಗರ್ಭದೊಳಿರ್ದ ಬಾಳೆಯಂ ಬಾಳನುಮಂ ಕಂಡೆತ್ತಿಕೊಂಡು ಮತ್ಸ್ಯಗಂಯುಂ ಮತ್ಸ ಗಂಧನುಮೆಂದು ಪೆಸರನಿಟ್ಟು ನಡಪಿ ಯಮುನಾನದೀತೀರದೊಳಿರ್ಪನ್ನೆಗಮಲ್ಲಿಗೊರ್ಮೆ ಬ್ರಹ್ಮರ ಮೊಮ್ಮನಪ್ಪ ಪರಾಶರ ಮುನೀಂದ್ರನುತ್ತರಾಪಥಕ್ಕೆ ಪೋಗುತ್ತುಂ ಬಂದು ತೊರೆಯ ತಡಿಯೊಳೋಡಮಂ ನಡೆಯಿಸುವ ಮತ್ಸ್ಯಗಂಧಿಯಂ ಕಂಡೆಮ್ಮನೀ ತೊರೆಯಂ ಪಾಯಿಸೆಂಬುದುಂ ಸಾಸಿರ್ವರೇಱಿದೊಡಲ್ಲದೀಯೋಡಂ ನಡೆಯದೆಂಬುದುಮಾಮನಿಬರ ಬಿಣ್ಪುಮಪ್ಪೆ ಮೇಱಿಸಂದೊಡಂತೆ ಗೆಯ್ವೆನೆಂದೋಡಮೇಱಿಸಿ ನಡೆಯಿಸುವಲ್ಲಿ ದಿವ್ಯಕನ್ನೆಯನೞ್ಕರ್ತು ನೋಡಿ-

ವ್ಯಾಸ ಅಥವಾ ಕೃಷ್ಣದ್ವೈಪಾಯನನ ಜನನ
ಮತ್ತೇಭವಿಕ್ರೀಡಿತ

ಮನದೊಳ್ ಸೋಲ್ತು ಮುನೀಂದ್ರನಾಕೆಯೊಡಲೀ ದುರ್ಗಂಧವೋಪಂತೆ ಯೋಜನ ಗಂಧಿತ್ವಮನಿತ್ತು ಕಾಂಡಪಟದಂತಿರ್ಪನ್ನೆಗಂ ಮಾಡಿ ಮಂಜನಲಂಪೞ್ಕಱನೀಯೆ ಕೂಡುವೆಡೆಯೊಳ್ ಜ್ಞಾನಸ್ವರೂಪಂ ಮಹಾಮುನಿಪಂ ಪುಟ್ಟಿದನಂತು ದಿವ್ಯಮುನಿಗಳ್ಗೇಗೆಯ್ಡೊಡಂ ತೀರದೇ

ವಚನ

ಅಂತು ನೀಲಾಂಬುದ ಶ್ಯಾಮನುಂ ಕನಕ ಪಿಂಗಳ ಜಟಾಬಂಧಕಳಾಪನುಂ ದಂಡ ಕಪಾಳ್ವ ಹಸ್ತನುಂ ಕೃಷ್ಣಮೃಗ ತ್ವಕ್ವ್ವ ರಿಧಾನನುಮಾಗೆ ವ್ಯಾಸಭಟ್ಟಾರಕಂ ಪುಟ್ಟುವುದು ಮಾತನನೊಡಗೊಂಡು ಸತ್ಯವತಿಗೆ ಪುನ ಕನ್ಯಾಭಾವಮಂ ದಯೆಗೆಯ್ದು ಪರಾಶರಂ ಪೋದನಿತ್ತಲ್-

ಶಂತನು ಮತ್ತು ಯೋಜನಗಂಧಿ ಸತ್ಯವತಿ ವಿವಾಹ
ಮತ್ತೇಭವಿಕ್ರೀಡಿತ

ಮೃಗಯಾವ್ಯಾಜದಿನೊರ್ಮೆ ಶಂತನು ತೊಱಲ್ತರ್ಪಂ ಪಳಂಚಲೈ ತನ್ಮೃ ಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂಬೋಲ್ ಸೋಲ್ತು ಕಂಡೋಲ್ದು ನಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು ನೀನ್ ಬಾ ಪೋಪಮೆಂದಂಗೆ ಮೆಲ್ಲಗೆ ತತ್ಕನ್ಯಕೆ ನಾಣ್ಚಿ ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ

ವಚನ

ಎಂಬುದುಂ ಶಂತನು ಪೊೞಲ್ಗೆ ಮಗುೞ್ದು ವಂದವರಯ್ಯನಪ್ಪ ದಾಶರಾಜನಲ್ಲಿಗೆ ಕೂಸಂ ಬೇಡೆ ಪೆರ್ಗಡೆಗಳನಟ್ಟಿದೊಡೆ ಗಾಂಗೇಯಂ ದೊರೆಯ ಪಿರಿಯ ಮಗನುಂ ಕ್ರಮಕ್ರಮಾರ್ಹನುಮಿರ್ದಂತೆನ್ನ ಮಗಳಂ ಕುಡೆವೆಮ್ಮ ಮಗಳ್ಗೆ ಪುಟ್ಟದಾತಂ ರಾಜ್ಯಕ್ಕೊಡೆಯನುಂ ಪಿರಿಯ ಮಗನುಂ ಕ್ರಮಕ್ಕರ್ಹನುಮಪ್ಪೊಡೆ ಕುಡುವೆಮೆನೆ ತದ್ವ ತ್ತಾಂತಮಂ ಮಂತ್ರಿಗಳಿಂ ಶಂತನು ಕೇಳ್ದು-

ಮತ್ತೇಭವಿಕ್ರೀಡಿತ

ಕ್ರಮಮಂ ವಿಕ್ರಮದಿಂದೆ ತಾಳ್ದುವ ಮಗಂ ಗಾಂಗೇಯನಿರ್ದಂತೆ ನೋಡ ಮರುಳ್ ಶಂತನು ತನ್ನದೊಂದು ಸವಿಗಂ ಸೋಲಕ್ಕಮಿತ್ತಂ ನಿಜಕ್ರಮಮಂ ತನ್ನಯ ಬೇಟದಾಕೆಯ ಮಗಂಗೆಂಬೊಂದಪಖ್ಯಾತಿ ಲೋಕಮನಾವರ್ತಿಸೆ ಬೞ್ದೊಡೆನ್ನ ಕುಲಮುಂ ತಕ್ಕೂರ್ಮೆಯುಂ ಮಾಸದೇ

ವಚನ

ಎಂದು ತನ್ನ ನಾಣ್ಗಾಪನೆ ಬಗೆದ (ದು)ತನು ಪರಿತಾಪಿತಶರೀರನುಮಾಗಿ ಶಂತನು ಕರಂಗೆರ್ದೆಗಿಡೆ ತದ್ವ ತ್ತಾಂತಮೆಲ್ಲಮಂ ಗಾಂಗೇಯನಱದು-

ಉತ್ಪಲಮಾಲೆ

ಎನ್ನಯ ದೂಸಱಿಂ ನೃಪತಿ ಬೇಡಿದುದಂ ಕುಡಲೊಲ್ಲಂದಂಗಜೋತ್ಪನ್ನ ವಿಮೋಹದಿಂದೞದಪಂ ಪತಿ ಸತ್ತೊಡೆ ಸತ್ತ ಪಾಪಮೆನ್ನನ್ನರಕಂಗಳೊಳ್ ತಡೆಯದೞ್ದ್ದುಗುಮೇವುದು ರಾಜ್ಯಲಕ್ಷ್ಮಿ ಪೋತನ್ನಯ ತಂದೆಯೆಂದುದನೆ ಕೊಟ್ಟು ವಿವಾಹಮನಿಂದೆ ಮಾಡುವೆಂ

ವಚನ

ಎಂದು ನಿಶ್ಚಯಿಸಿ ಗಾಂಗೇಯಂ ದಾಶರಾಜನಲ್ಲಿಗೆವಂದಾತನ ಮನದ ತೊಡರ್ಪಂ ಪಿಂಗೆ ನುಡಿದು-

ಉತ್ಪಲಮಾಲೆ

ನೀಡಿರದೀವುದೀ ನಿಜ ತನೂಜೆಯನೀ ವಧುಗಾದ ಪುತ್ರರೊಳ್ಕೂಡುಗೆ ರಾಜ್ಯಲಕ್ಷ್ಮಿ ಮೊರೆಯಲ್ತೆನಗಂತದು ಪೆಂಡಿರೆಂಬರೊಳ್ಕೂಡುವನಲ್ಲೆನಿಂದು ಮೊದಲಾಗಿರೆ ನಿಕ್ಕುವಮೆಂದು ರಾಗದಿಂದಕೂಡಿದನುಯ್ದು ಸತ್ಯವತಿಯಂ ಸತಿಯಂ ಪತಿಯೊಳ್ ನದೀಸುತಂ

ವಚನ

ಅಂತು ಶಂತನುವುಂ ಸತ್ಯವತಿಯುಮನ್ಯೋನ್ಯಾಸಕ್ತಚಿತ್ತರಾಗಿ ಕೆಲವು ಕಾಲಮಿರ್ಪನ್ನೆಗಮವರ ಬೇಟದ ಕಂದಲ್ಗಳಂತೆ ಚಿತ್ರಾಂಗದ ವಿಚ್ತಿತ್ರವೀರ್ಯರೆಂಬ ಮಕ್ಕಳ್ ಪುಟ್ಟಿ ಮಹಾಪ್ರಚಂಡರುಂ ಪ್ರತಾಪಿಗಳುಮಾಗಿ ಬಳೆಯುತ್ತಿರ್ಪನ್ನೆಗಂ ಶಂತನು ಪರಲೋಕ ಪ್ರಾಪ್ತನಾದೊಡೆ ಗಾಂಗೇಯಂ ತದುಚಿತ ಪರಲೋಕ ಕ್ರಿಯೆಗಳಂ ಮಾಡಿ ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ ರಾಜ್ಯಂಗೆಯಿಸುತ್ತುಮಿರ್ಪನ್ನೆಗಮೊರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚೆ ಕರುಕ್ಷೇತ್ರಮಂ ಕಳಂಬೇೞ್ದು ಕಾದಿ ಸತ್ತೊಡೆ ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ-

ವಿಚಿತ್ರವೀರ್ಯನಿಗೆ ಅಂಬಿಕೆ ಅಂಬಾಲಿಕೆಯರೊಡನೆ ವಿವಾಹ
ಮತ್ತೇಭವಿಕ್ರೀಡಿತ

ಸಕಳ ಕ್ಷತ್ರಿಯ ಮೋಹದಿಂ ನಿಜಭುಜ ಪ್ರಾರಂಭದಿಂ ಪೋಗಿ ತಾಗಿ ಕೆಲರ್ ನೊಂದೊಡೆ ಕಾದಿ ರಾಜಸುತರೊಳ್ ತನ್ನಂಕದೊಂದುಗ್ರಸಾಯಕದಿಂ ನಾಯಕರಂ ಪಡಲ್ವಡಿಸುತುಂ ತಾಂ ತಂದನಂದಂಬೆಯಂಬಿಕೆಯಂಬಾಲೆಯರೆಂಬ ಬಾಲೆಯ ರನೇಂ ಭೀಷ್ಮಂ ಯಶೋಭಾಗಿಯೋ

ವಚನ

ಅಂತು ತಂದು ತನ್ನ ತಮ್ಮಂ ವಿಚಿತ್ರವೀರ್ಯಂಗಾ ಮೂವರ್ಕನ್ನೆಯರಂ ಪಾಣಿ ಗ್ರಹಣಂಗೆಯ್ವಾಗಳೆಲ್ಲರಿಂ ಪಿರಿಯಾಕೆ ನಿನ್ನನಲ್ಲದೆ ಪೆಱರನೊಲ್ಲೆನೆಂದಿರ್ದೊಡೆ ಮತ್ತಿನಿರ್ವರುಮಂ ಮದುವೆಯಂ ಮಾಡಿ ಗಾಂಗೇಯನಂಬೆಯನಿಂತೆಂದಂ-

ಉತ್ಪಲಮಾಲೆ

ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋದಾತ್ತ ಸಮಸ್ತ ಲೋಕಮಱಿದಂತಿರೆ ಪೂಣ್ದೆನಗಾಗದಂಗಜೋತ್ಪತ್ತಿ ಸುಖಕ್ಕೆ ಸೋಲಲೞಿಗುಂ ಪುರುಷವ್ರತವೀಗಳಬ್ದೆಯೆಂದತ್ತಿಗೆಯೆಂಬ ಮಾತನೆನಗೇನೆನಲಕ್ಕುಮೊ ಪಂಕಜಾನನೇ

ಅಂಬೆಯ ತೊಳಲಾಟ
ವಚನ

ಎಂದು ನುಡಿದ ಗಾಂಗೇಯನ ನುಡಿಯೋಳವಸರಮಂ ಪಸರಮಂ ಪಡೆಯದೆ ತನಗೆ ಕಿಱಿಯಂದುಂಗುರವಿಟ್ಟ ಸಾಲ್ವಲನೆಂಬರಸನಲ್ಲಿಗೆ ಪೋಗಿ ನೀನೆನ್ನಂ ಕೈಕೊಳವೇೞ್ಕುಮೆಂದೊಡಾತನಿಂತೆಂದಂ-

ಕಂದ

ಬಂಡಣದೊಳೆನ್ನನೋಡಿಸಿಕೊಂಡುಯ್ದಂ ನಿನ್ನನಾ ಸರಿತ್ಸುತನಾನುಂಪೆಂಡತಿಯೆನಾದೆನದಱಿಂಪೆಂಡಿರ್ ಪೆಂಡಿರೊಳದೆಂತು ಬೆರಸುವರಬಲೇ

ವಚನ

ಎಂದು ಸಾಲ್ವಲಂ ತನ್ನ ಪರಿಭವದೊಳಾದ ಸಿಗ್ಗಂ ಸಾಲ್ವಿನಮುಂಟುಮಾಡಿದೊಡಾತನ ಮನಮನೊಡಂಬಡಿಸಲಾಱದೆ ಪರಶುರಾಮನಲ್ಲಿಗೆ ಪೋಗಿ ಭೀಷ್ಮನೆನ್ನ ಸ್ವಯಂವರದೊಳ್ ನೆರೆದರಸುಮಕ್ಕಳೆಲ್ಲರುಮನೋಡಿಸಿ ಕೊಂಡು ಬಂದೆನ್ನ ಂ ಮದುವೆಯಂ ನಿಲಲೊಲ್ಲ ದ್ವ ಟ್ಟಿ ಕಳೆದೊಡೆನ್ನ ದೆವಸಮುಂ ಜವ್ವನಮುಮಡವಿಯೊಳಗೆ ಪೂತ ಪೂವಿನಂತೆ ಕಿಡಲೀಯದಾತನನೆನ್ನಂ ಪಾಣಿಗ್ರಹಣಂ ಗೆಯ್ವಂತು ಮಾಡು ಮಾಡಲಾಱದೊಡೆ ಕಿಚ್ಚಂ ದಯೆಗೆಯ್ವುದೆಂದಂಬೆ ಕಣ್ಣ ನೀರಂ ತುಂಬೆ-

ಮತ್ತೇಭವಿಕ್ರೀಡಿತ

ನಯಮಂ ನಂಬುವೊಡೆನ್ನ ಪೇೞ್ದ ಸತಿಯಂ ಕೈಕೊಂಡನಂತಲ್ಲದುರ್ಣಯಮಂ ನಚ್ಚುವೊಡೆನ್ನನುಗ್ರ ರಣದೊಳ್ ಮೇಣ್ ಮೀಱಿ ಮಾರ್ಕೊಂಡನಾರಯೆ ಕಜ್ಜಂ ಪೆಱತಿಲ್ಲ ಶಂತನು ಸುತಂಗೆನ್ನಂ ಕರಂ ನಂಬಿದಂಬೆಯೊಳೆನ್ನ ಅಂಬೆವಲಂ ವಿವಾಹವಿಧಿಯಂ ಮಾಳ್ಪೆಂ ಪೆಱರ್ ಮಾೞ್ಪರೇ

ವಚನ

ಎಂದು ನಾಗಪುರಕ್ಕೆ ವರ್ಷ ಪರಶುರಾಮನ ಬರವಂ ಗಾಂಗೇಯಂ ಕೇಳ್ದಿದಿರ್ವಂದು ಕನಕ ರಜತ ಪಾತ್ರಂಗಳೊಳರ್ಘ್ಯಮಂ ಕೊಟ್ಟು ಪೊಡಮಟ್ಟು-

ಮತ್ತೇಭವಿಕ್ರೀಡಿತ

ಬೆಸನೇನೆಂದೊಡೆ ಪೇೞ್ವೆನೆನ್ನ ಬೆಸನಂ ಕೈಕೊಳ್ವುದೀ ಕನ್ನೆಯಂಪಸುರ್ವಂದರ್ ಪಸೆಯೆಂಬಿವಂ ಸಮದು ನೀಂ ಕೈಕೊಳ್ ಕೊಳಲ್ಕಾಗದಂಬೆಸಕಂ ಚಿತ್ತದೊಳುಳ್ಳೊಡೀಗಳಿವರೆಮ್ಮಾಚಾರ್ಯರೆಂದೋವದೇರ್ವೇಸನಂ ಮಾಣದೆ ಕೈದುಗೊಳ್ಳೆರಡರೊಳ್ ಮೆಚ್ಚಿತ್ತೆನೇನೆಂದಪಯ್

ವಚನ

ಎಂದು ನುಡಿದ ಪರಶುರಾಮನ ನುಡಿಯಂ ಗಾಂಗೇಯಂ ಕೇಳ್ದೆನಗೆ ವೀರಶ್ರೀಯುಂ ಕೀರ್ತಿಶ್ರೀಯುಓ ಅಲ್ಲದುೞಿದ ಪೆಂಡಿರ್ ಮೊರೆಯಲ್ಲ ನೀವಿದನೇಕಾಗ್ರಹಂಗೆಯ್ವಿರೆಂದೊಡೆಂತುಮೆಮ್ಮೊಳ್ ಕಾದಲ್ವೇೞ್ವುದೆಂದು-

ಮತ್ತೇಭವಿಕ್ರೀಡಿತ

ಕೆಳರ್ದಂದುಗ್ರ ರಣಾಗ್ರಹ ಪ್ರಣಯದಿಂದಾಗಳ್ ಕುರುಕ್ಷೇತ್ರಮಂಕಳವೇೞ್ದೀ ರ್ವರುಮೈಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರ ಸಂಕುಳದಿಂದೊರ್ವರನೊರ್ವರೆಚ್ಚು ನಿಜಪೀಠಾಂಭೋಜದಿಂ ಬ್ರಹ್ಮನುಚ್ಚಳಿಪನ್ನಂ ಪಿರಿದೊಂದು ಸಂಕಟಮನೀ ತ್ರೈಲೋಕ್ಯದೊಳ್ ಮಾಡಿದರ್

ಶಿಖರಿಣಿ

ಅತರ್ಕ್ಯಂ ವಿಕ್ರಾಂತಂ ಭುಜಬಲಮಸಾಮಾನ್ಯಮಧಿಕಂಪ್ರತಾಪಂ ಪೋಗೀತಂಗೆಣೆಯೆ ದಿವಿಜರ್ ವಾಯುಪಥದೊಳ್ಶಿತಾಸ್ತ್ರಂಗಳ್ ಪೊಂಕಂಗಿಡಿಸೆ ಸುಗಿದಂ ಭಾರ್ಗವನಿದೇಂಪ್ರತಿಜ್ಞಾ ಗಾಂಗೇಯಂಗದಿರದಿರ‍್ ನಿಲ್ವನ್ನರೊಳರೇ

ಪರಷುರಾಮನ ಸೋಲು- ಅಂಬೆಯ ಅಗ್ನಿ ಪ್ರವೇಶ- ವಿಚಿತ್ರವೀರ್ಯನ ಮರಣ
ವಚನ

ಅಂತು ಗಾಂಗೇಯನೊಳ್ ಪರಶುರಾಮಂ ಕಾದಿ ಬಸವೞಿದುಸಿರಲಪ್ಪೊಡಮಾಱದೆ ಮೂರ್ಛೆವೋಗಿರ್ದನಂ ಕಂಡಂಬೆಯೆಂಬ ದಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಮಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆಮಗನಾಗಿ ಪುಟ್ಟಿ ಕಾರಣಾಂತರದೊಳ್ ಶಿಖಂಡಿಯಾಗಿರ್ದಳಿತ್ತ ಭೀಷ್ಮರ ಬೆಂಬಲದೊಳ್ ವಿಚಿತ್ರವೀರ್ಯನು ಮವಾರ್ಯವೀರ್ಯನುಮಾಗಿ ಕೆಲವು ರಾಜ್ಯಲಕ್ಷ್ಮಿಯಂ ತಾಳ್ದಿ ರಾಜಯಕ್ಷ್ಮ ತಪ್ತಶರೀರನಾತ್ಮಜ ವಿಗತಜೀವಿಯಾಗಿ ಪರಲೋಕಪ್ರಾಪ್ತನಾದೊಡೆ ಗಾಂಗೇಯನುಂ ಸತ್ಯವತಿಯುಮತ್ಯಂತ ಶೋಕಾನಲ ದಹ್ಯಮಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯೆಗಳಂ ಮಾಡಿ ರಾಜ್ಯಂ ನಷ್ಟರಾ (ಜ) ಮಾದುದರ್ಕೆ ಮಮ್ಮಲಮಱುಗಿ ಯೋಜನಗಂ ಸಿಂಧುಪುತ್ರನನಿಂತೆಂದಳ್-

ಮತ್ತೇಭವಿಕ್ರೀಡಿತ

ಮಗನೆಂಬಂತು ಧರಿತ್ರಿ ನಿನ್ನನುಜರಂ ಕೈಕೊಂಡು ಮುಂ ಪೂಣ್ದ ನನ್ನಿಗೆ ಬನ್ನಂ ಬರಲೀಯದಾರ್ತೆಸಗಿದೀ ವಿಖ್ಯಾತಿಯುಂ ಕೀರ್ತಿಯುಂಮುಗಿಲಂ ಮುಟ್ಟಿದುದಲ್ತೆ ನಮ್ಮ ಕುಲದೊಳ್ ಮಕ್ಕಳ್ಪೆಱರ್ ನೀನೇ ಜಟ್ಟಿಗನೈ ಮುನ್ನಿನೊರಂಟುವೇಡ ಮಗನೇ ಕೈಕೊಳ್ ಧರಾಭಾರಮಂ

ವಚನ

ಎಂದು ನಿನ್ನನಾನಿನಿತಂ ಕೈಯೊಡ್ಡಿ ಬೇಡಿದೆನೆಂದು ಸತ್ಯವತಿಗಮರಾ ಪಗಾನಂದನನಿಂತೆಂದಂ

ಕಂದ

ಕಿಡುಗುಮೆ ರಾಜ್ಯಂ ರಾಜ್ಯದತೊಡರ್ಪದೇವಾೞ್ತೆ ಬಾೞ್ತೆ ನನ್ನಿಯ ನುಡಿಯಂಕಿಡೆ ನೆಗೞೆ ನಾನುಮೆರಡಂನುಡಿದೊಡೆ ಹಠಿ ಹರ ಹಿರಣ್ಯಗರ್ಭರ್ ನಗರೇ

ಚಂಪಕಮಾಲೆ

ಹಿಮಕರನಾತ್ಮಶೀತರುಚಿಯಂ ದಿನನಾಯಕನುಷ್ಣದೀಧಿತಿಕ್ರಮಮನಗಾಧ ವಾರಿಯೆ ಗುಣ್ಪನಿಳಾವಧು ತನ್ನ ತಿಣ್ಪನುತ್ತಮ ಕುಲಶೈಲಮುನ್ನತಿಯನೇಳಿದವಾಗೆ ಬಿಸುೞ್ಪೊಡಂ ಬಿಸುೞ್ಕೆ ಮ ಬಿಸುಡೆಂ ಮದೀಯ ಪುರುಷವ್ರತಮೊಂದುಮನೀಗಳಂಬಿಕೇ

ವಚನ

ಎಂದು ತನ್ನ ನುಡಿದ ಪ್ರತಿಜ್ಞೆಯನೇಗೆಯ್ದು ತಪ್ಪಿದನಿಲ್ಲ-

ಕಂದ

ರಂಗತ್ತರಂತ ರ್ವಾರ್ಧಿ ಚಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂಗಂಗೇಯನುಂ ಪ್ರತಿಜ್ಞಾಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ

ವ್ಯಾಸರ ಯೋಗಶಕ್ತಿಯಿಂದ ಧೃತರಾಷ್ಟ್ರ, ಪಾಂಡು, ವಿದುರರ ಜನನ
ವಚನ

ಅಂತಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನೇಗೆಯ್ದುಂಮೊಡಂಬಡಿಸಲಾಱದೆ ಸತ್ಯವತಿ ತಾನುಮಾತನುಮಾಳೋಚಿಸಿ ನಿಶ್ಚಿತಮಂತ್ರರಾಗಿ ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ವುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್ ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದವ್ಯವಚ್ಛಿನ್ನಮಾಗಿ ಬಂದ ಸೋಮವಂಶವಿಗಳೆಮ್ಮ ಕುಲಸಂತತಿ ಗಮಾರುಮಿಲ್ಲದೆಡೆವಱಿದು ಕಿಡುವಂತಾಗಿರ್ದುದದು ಕಾರಣದಿಂ ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳಂಬಿಕೆಗಮಂಬಾಲೆಗಂ ಪುತ್ರರಪ್ಪಂತು ವರಪ್ರಸಾದಮಂ ದಯೆಗೆಯ್ವುದೆನೆ ಅಂತೆಗೆಯ್ವೆನೆಂದು-

ಚಂಪಕಮಾಲೆ

ತ್ರಿದಶ ನರಾಸುರೋರಗ ಗಣ ಪ್ರಭು ನಿಶ್ಚಿತ ತತ್ತ್ವಯೋಗಿ ಯೋಗದ ಬಲಮುಣ್ಮಿ ಪೊಣ್ಮಿ ನಿಲೆ ಪುತ್ರ ವರಾರ್ಥಿಗಳಾಗಿ ತನ್ನ ಕಟ್ಟಿದಿರೊಳೆ ನಿಂದರಂ ನಯದೆ ನೋಡೆ ಮುನೀಂದ್ರನ ದಿವ್ಯದೃಷ್ಟಿಮಂತ್ರದೊಳೆ ಪೊದೞ್ದುದಾ ಸತಿಯರಿರ್ವರೊಳಂ ನವಗರ್ಭವಿಭ್ರಮಂ

ವಚನ

ಅಂತು ದಿವ್ಯಸಂಯೋಗದೊಳಿರ್ವರುಂ ಗರ್ಭಮಂ ತಾಳ್ದರ್ ಮತ್ತೊರ್ವ ಮಗನಂ ವರಮಂ ಬೇಡೆಂದಂಬಿಕೆಗೆ ಪೇೞ್ದೊಡಾಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲಲಸಿ ತನ್ನ ಸೂೞುಯ್ತೆಯಂ ತನ್ನವೊಲೆ ಕಯ್ಗೆಯ್ದು ಬರವಂ ಬೇಡಲಟ್ಟಿದೊಡಾಕೆಗೆ ವರದನಾಗಿ ವ್ಯಾಸಮುನೀಂದ್ರಂ ಸತ್ಯವತಿಗಂ ಭೀಷ್ಮಂಗಮಿಂತೆಂದನೆನ್ನ ವರಪ್ರಸಾದ ಕಾಲದೊಳೆನ್ನಂ ಕಂಡಂಬಿಕೆ ಕಣ್ಣಂ ಮುಚ್ಚಿದಳಪ್ಪುದಱಿಂದಾಕೆಗೆ ಧೃತರಾಷ್ಟ್ರನೆಂಬ ಮಗನತ್ಯಂತ ಸುಂದರಾಂಗನಾಗಿಯುಂ ಜಾತ್ಯಂಧನಕ್ಕುಮಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಿಂದಾಕೆಗೆ ಪಾಂಡುರೋಗಸಂಗತನುಮನೇಕ ಭದ್ರಲಕ್ಷಣಲಕ್ಷಿತನುಮತ್ಯಂತ ಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕ್ಕು ಮಂಬಿಕೆಯ ಸೂೞುಯ್ತೆಯಪ್ಪಾಕೆ ದರಸಹಿತ ವದನಾರವಿಂದೆಯಾಗಿ ಬರವಂ ಕೈಕೊಂಡಳಪ್ಪುದಱಂದಾಕೆಯ ಮಗಂ ವಿದುರನೆಂಬ ನನಂಗಾಕಾರನುಮಾಚಾರವಂತನುಂ ಬುದ್ಧಿವಂತನುಮಕ್ಕುಮೆಂದು ಪೇೞ್ದು ಮುನಿಪುಂಗವಂ ಪೋದನಿತ್ತಂ-

ಪೃಥ್ವಿ

ವರಂಬಡೆದ ಸಂತಸಂ ಮನದೊಳಾಗಲೊಂದುತ್ತರೋತ್ತರಂ ಬಳೆವ ಮಾೞ್ಕೆಯಿಂ ಬಳೆವ ಗರ್ಭಮಂ ತಾಳ್ದಿಯಾದರಂ ಬೆರಸು ಪೆತ್ತರಂದು ಧೃತರಾಷ್ಟ್ರ ವಿಖ್ಯಾತ ಪಾಂಡುರಾಜ ವಿದುರರ್ಕಳಂ ಕ್ರಮದೆ ಮೂವರು ಮೂವರಂ

ಕಂದ

ಆ ವಿವಿಧ ಲಕ್ಷಣಂಗಳೊಳಾವರಿಸಿದ ಕುಲದ ಬಲದ ಚಲದಳವಿಗಳೊಳ್ಮೂವರುಮನಾದಿ ಪುರುಷರ್ಮೂವರುಮೆನಲಲ್ಲದತ್ತ ಮತ್ತೇನೆಂಬರ್

ವಚನ

ಅಂತವರ್ಗೆ ಜಾತಕರ್ಮ ನಾಮಕರಣಾನ್ನಪ್ರಾಶನ ಚೌಲೋಪನಯವಾದಿ ಷೋಡಶಕ್ರಿಯೆಗಳಂ ಗಾಂಗೇಯಂ ತಾಂ ಮುಂತಿಟ್ಟು ಮಾಡಿ ಶಸ್ತ್ರ ಶಾಸ್ತ್ರಂಗಳೊಳತಿ ಪರಿಣತರಂ ಮಾಡಿ ಮದುವೆಯಂ ಮಾಡಲೆಂದು ಧೃತರಾಷ್ಟ್ರಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟು-

ಕರ್ಣನ ಜನನ ಮತ್ತು ಏಳಿಗೆ
ಕಂದ

ಮತ್ತಿತ್ತ ನೆಗೞ್ತೆಯ ಪುರುಷೋತ್ತಮನ ಪಿತಾಮಹಂಗೆ ಶೂರಂಗೆ ಮಗಳ್ ಮತ್ತಗಜಗಮನೆ ಯದುವಂಶೋತ್ತಮೆಯೆನೆ ಕುಂತಿ ಕುಂತಿಭೋಜನ ಮನೆಯೊಳ್

ಕಂದ

ಬಳೆಯುತ್ತಿರ್ಪನ್ನೆಗಮಾನಳಿನಾಸ್ಯೆಯ ಗೆಯ್ದುದೊಂದು ಶುಶ್ರೂಷೆ ಮನಂ ಗೊಳೆ ಕೊಟ್ಟಂ ದುರ್ವಾಸಂವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ

ವಚನ

ಅಂತು ಕೊಟ್ಟಯ್ದು ಮಂತ್ರಾಕ್ಷರಂಗಳನು ಆಹ್ವಾನಂ ಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೊಂದು ದಿವಸಂ ಕೊಂತಿ-

ಕಂದ

ಪುಚ್ಚವಣಂ ನೋಡುವೆನೆನ್ನಿಚ್ಚೆಯೊಳೀ ಮುನಿಯ ವರದ ಮಹಿಮೆಯನೆನುತಂದುಚ್ಚಸ್ತನಿ ಗಂಗೆಗ ಶಫರೋಚ್ಚಳಿತ ತರತ್ತರಂಗೆಗೊರ್ವಳೆ ಬಂದಳ್

ಕಂದ

ಬಂದು ಸುರನದಿಯ ನೀರೊಳ್ಮಿಂದಿನನಂ ನೋಡಿ ನಿನ್ನ ದೊರೆಯನೆ ಮಗನಕ್ಕೆಂದಾಹ್ವಾನಂಗೆಯ್ಯಲೊಡಂ ದಲ್ ಧರೆಗಿೞಿದನಂದು ದಶಸತಕಿರಣಂ

ವಚನ

ಅಂತು ನಭೋಭಾಗದಿಂ ಭೂಮಿಭಾಗಕ್ಕಿೞಿದು ತನ್ನ ಮುಂದೆ ನಿಂದರವಿಂದ ಬಾಂಧವನಂ ನೋಡಿ ನೋಡಿ-

ಕಂದ

ಕೊಡಗೂಸುತನದ ಭಯದಿಂನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲೊೞ್ಕುಡಿಯಲೊಡಗೂಡೆ ಗಂಗೆಯಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ

ವಚನ

ಆಗಳಾದಿತ್ಯನಾಕೆಯ ಮನದ ಶಂಕೆಯುಮಂ ನಡುಗುವ ಮೆಯ್ಯ ನಡುಕುಮುಮಂ ಕಿಡೆನುಡಿದಿಂತೆಂದಂ-

ಕಂದ

ಬರಿಸಿದ ಕಾರಣಮಾವುದೊತರುಣಿ ಮುನೀಶ್ವರನ ಮಂತ್ರಮೇ ದೊರೆಯೆಂದಾಂಮರುಳಿಯೆನೆಯಱಿದುಮಱಿಯದೆಬರಿಸಿದೆನ್ನಿನ್ನೇೞಿಮೆಂದೊಡಾಗದು ಪೋಗಲ್

ಕಂದ

ಮುಂ ಬೇಡಿದ ವರಮಂ ಕುಡದಂಬುಜಮುಖಿ ಪುತ್ರನೆನ್ನ ದೊರೆಯಂ ನಿನಗಕ್ಕಂಬುದುಮೊದವಿದ ಗರ್ಭದೊಳಂಬುಜಮಿತ್ರನನೆ ಪೋಲ್ವ ಮಗನೊಗೆತಂದಂ

ಕಂದ

ಒಡವುಟ್ಟಿದ ಮಣಿಕುಂಡಲಮೊಡವುಟ್ಟಿದ ಸಹಜಕವಚಮಮರ್ದಿರೆ ತನ್ನೊಳ್ ತೊಡರ್ದಿರೆಯುಂ ಬಂದಾಕೆಯನಡುಕಮನೊಡರಿಸಿದನಾಗಳಾ ಬಾಲಿಕೆಯಾ

ವಚನ

ಅಂತು ನಡನಡನಡುಗಿ ಜಲದೇವತೆಗಳಪ್ಪೊಡಂ ಮನಂಗಾಣ್ಬರೆಂದು ನಿಧಾನಮ ನೀಡಾಡುವಂತೆ ಕೂಸಂ ಗಂಗೆಯೊಳೀಡಾಡಿ ಬಂದಳಿತ್ತ ಗಂಗಾದೇವಿಯುಮಾ ಕೂಸಂ ಮುೞುಗಲೀಯದೆ ತನ್ನ ತೆರೆಗಳೆಂಬ ನಳಿತೋಳ್ಗಳಿನೊಯ್ಯನೊಯ್ಯನೆ ತೞ್ಕೈಸಿ ತರೆ ಗಂಗಾತೀರ ದೊಳಿರ್ಪ ಸೂತನೆಂಬಂ ಕಂಡು-

ಉತ್ಪಲಮಾಲೆ

ಬಾಳದಿನೇಶಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ ಮೇಣ್ ಫಣೀಂದ್ರಾಳಯದಿಂದಮುರ್ಚಿದ ಫಣಾಮಣಿ ಮಂಗಳ ರಶ್ಮಿಯೋ ಕರಂ ಮೇಲಿಸಿದಪ್ಪುದೆನ್ನೆರ್ದೆಯನೆಂದು ಬೊದಿಲ್ಲೆನೆ ಪಾಯ್ದು ನೀರೊಳಾಬಾಳನನಾದಮಾದರದೆ ಕೊಂಡೊಸೆದಂ ನಿಧಿಗಂಡನಂತೆವೋಲ್

ವಚನ

ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ ಕೂಸನಿಟ್ಟೊಡಾಕೆ ರಾಗಿಸಿ ಸುತನ ಸೂತಕಮಂ ಕೊಂಡಾಡೆ-

ಕಂದ

ಅಗುೞ್ದರಲಾ ಕುೞಿಯೊಳ್ ತೊಟ್ಟಗೆ ನಿಧಿಗಂಡಂತೆ ವಸುಧೆಗಸದಳಮಾಯ್ತಾ ಮಗನಂದಮೆಂದು ಲೋಗರ್ಬಗೆದಿರೆ ವಸುಷೇಣನೆಂಬ ಪೆಸರಾಯ್ತಾಗಳ್

ಕಂದ

ಅಂತು ವಸುಷೇಣನಾ ಲೋಕಾಂತಂಬರಮಳವಿ ಬಳೆಯೆ ಬಳೆದೆಸಕಮದೋ ರಂತೆ ಜನಂಗಳ ಕರ್ಣೋಪಾಂತದೊಳೊಗೆದೆಸೆಯೆ ಕರ್ಣನೆಂಬನುಮಾದಂ

ವಚನ

ಆಗಿಯಾತಂ ಶಸ್ತ್ರಶಾಸ್ತ್ರವಿದ್ಯೆಯೊಳತಿಪರಿಣತನಾಗಿ ನವಯೌವನಾಂಭದೊಳ್-

ಚಂಪಕಮಾಲೆ

ಪೊಡೆದುದು ಬಿಲ್ಲ ಜೇರೊಡೆಯೆ ವಿಱುವ ವೈರಿ ನರೇಂದ್ರರಂ ಸಿಡಿಲ್ವೊಡೆದವೊಲಟ್ಟಿ ಮುಟ್ಟಿ ಕಡಿದಿಕ್ಕಿದುದಾದೆಡರಂ ನಿರಂತರಂಕಡಿಕಡಿದಿತ್ತ ಪೊನ್ನ ಬುಧ ಮಾಗಧ ವಂದಿಜನಕ್ಕೆ ಕೊಟ್ಟ ಕೋಡೆಡರದೆ ಬೇಡಿಮೋಡಿಮಿದು ಚಾಗದ ಬೀರದ ಮಾತು ಕರ್ಣನಾ

ವಚನ

ಅಂತು ಭುವನ ಭವನಕ್ಕೆಲ್ಲಹ ನೆಗೞ್ದ ಕರ್ಣನ ಪೊಗೞ್ತೆಂ ನೆಗೞ್ತೆಯುಮುನೀಂದ್ರಂ ಕೇಳ್ದು ಮುಂದೆ ತನ್ನಂಶದೊಳ್ ಪುಟ್ಟುವರ್ಜುನಂಗಮಾತಂಗಂ ದ್ವಂದ್ವಯುದ್ಧಮುಂಟೆಂಬುದಂ ತನ್ನ ದಿವ್ಯಜ್ಞಾನದಿಂದಮಱಿದುವಿಂತಲ್ಲದೀತನನಾತಂ ಗೆಲಲ್ ಬಾರದೆಂದು-

ಕಂದ

ಬೇಡಿದೊಡೆ ಬಲದ ಬರಿಯುಮನೀಡಾಡುಗುಮುಗಿದು ಕರ್ಣನೆಂದಾಗಳೆ ಕೈ ಗೂಡಿದ ವಟುವಾಕೃತಿಯೊಳೆಬೇಡಿದನಾ ಸಹಜಕವಚಮಂ ಕುಂಡಳಮಂ

ಕಂದ

ಬೇಡಿದುದನರಿದುಕೊಳ್ಳೆನೆಬೇಡಿದುದಂ ಮುಟ್ಟಲಾಗದೆನಗೆನೆ ನೆಗೞ್ದ ಲ್ಲಾಡದೆ ಕೊಳ್ಳೆಂದರಿದೀಡಾಡಿದನಿಂದ್ರಂಗೆ ಕವಚಮಂ ರಾಧೇಯಂ

ಕಂದ

ಎಂದುಂ ಪೋಗೆಂದನೆ ಮಾಣೆಂದನೆ ಪೆಱತೊಂದನೀವೆನೆಂದನೆ ನೊಂದಃ ಎಂದನೆ ಸೆರಗಿಲ್ಲದೆ ಪಿಡಿಯೆಂದನಿದೇಂ ಕಲಿಯೊ ಚಾಗಿಯೋ ರವಿತನಯಂ

ವಚನ

ಅಂತು ತನ್ನ ಸಹಜಕವಚಮಂನೆತ್ತರ್ ಪನ ಪನ ಪನಿಯೆ ತಿದಿಯುಗಿವಂತುಗಿದು ಕೊಟ್ಟೊಡಿಂದ್ರನಾತನ ಕಲಿತನಕೆ ಮೈಚ್ಚಿ-

ಕಂದ

ಸುರ ದನುಜ ಭುಜಗ ವಿದ್ಯಾಧರ ನರಸಂಕುಲದೊಳಾರನಾದೊಡಮೇನೋ ಗರ ಮುಟ್ಟೆ ಕೊಲ್ಗುಮಿದು ನಿಜವಿರೋಧಿಯಂ ಧುರದೊಳೆಂದು ಶಕ್ತಿಯನಿತ್ತಂ

ವಚನ

ಅಂತಿಂದ್ರನಿತ್ತ ಶಕ್ತಿಯಂ ಕೈಕೊಂಡು ನಿಜಬುಜಶಕ್ತಿಯಂ ಪ್ರಕಟಂ ಮಾಡಲೆಂದು ರೇಣುಕಾನಂದನನಲ್ಲಿಗೆ ಪೋಗಿ-

ಕಂದ

ಕೂರಿಸೆ ಗುರು ಶುಶ್ರೂಷೆಯೊಳಾ ರಾಮನನುಗ್ರ ಪರಶು ಪಾಟಿತ ರಿಪು ವಂ ಶಾರಾಮನನಿಷುವಿದ್ಯಾಪಾರಗನೆನಿಸಿದುದು ಬಲ್ಮೆ ವೈಕರ್ತನನಾ

ವಚನ

ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮರೆದೊಱಗಿದಾ ಪ್ರಸ್ತಾವದೊಳಾ ಮುನಿಗೆ ಮುನಿಸಂ ಮಾಡಲೆಂದಿಂದ್ರನುಪಾಯದೊಳಟ್ಟಿದ ವಜ್ರಕೀಟಂಗಳ್ ಕರ್ಣನೆರಡುಂ ತೊಡೆಯುಮ ನುಳಿಯನೂಱಿ ಕೊಂಡಂತಿಯೊಳ್ ಬೆಟ್ಟಿದಂತತ್ತಮಿತ್ತಮುರ್ಚಿ ಪೋಗೆಯುಮದನಱಿಯದಂತೆ ಗುರುಗೆ ನಿದ್ರಾಭಿಗಾತಮಕ್ಕುಮೆಂದು ತಲೆಯನು ಗುರಿಸುತ್ತುಮಿರೆಯಿರೆ-

ಕಂದ

ಆತಿ ವಿಶದ ವಿಶಾಲೋರುಕ್ಷತದಿಂದೊಱೆದನಿತು ಜಡೆಯುಮಂ ನಾಂದಿ ಮನ ಕ್ಷತದೊಡನೆೞ್ಚಱಿಸಿದುದುತ್ಥಿತಮಾ ವಂದಸ್ರ ಮಿಶ್ರ ಗಂಧಂ ಮುನಿಯಂ

ವಚನ

ಅಂತೆೞ್ಚತ್ತು ನೆತ್ತರ ಪೊನಲೊಳ್ ನಾಂದು ನನೆದ ಮೆಯ್ಯುಮಂ ತೊಯ್ದು ತಳ್ಪೊಯ್ದ ಜಡೆಯುಮಂ ಕಂಡೀ ಕ್ಷತ್ರಿಯಂಗಲ್ಲದಾಗದು ಪಾರ್ವನೆಂದೆನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರ ಮವಸಾನಕಾಲದೊಳ್ ಬೆಸಕೆಯ್ಯದಿರ್ಕೆಂದು ಶಾಪಮನಿತ್ತನಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳಿರ್ಪನ್ನೆಗಮಿತ್ತಲ್ ಕುಂತಿಗವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ-

ಕುಂತಿಯ ವಿವಾಹ - ಪಾಂಡವರ ಜನನ
ಚಂಪಕಮಾಲೆ

ಸೊಗಯಿಪ ತಮ್ಮ ಜವ್ವನದ ತಮ್ಮ ವಿಭೂತಿಯ ತಮ್ಮ ತಮ್ಮ ಚೆಲ್ವುಗಳ ವಿಲಾಸದುರ್ಮೆಗಳೊಳಾವೆವಗಾಗಿಪೆವೆಂದು ಬಂದಂ ಚೆ ನ್ನಿಗರುಮನಾಸೆಕಾಱರುಮನೊಲ್ಲದೆ ಚೆಲ್ವಿಡಿದಿರ್ದ ರೂಪು ದೃಷ್ಟಿಗೆವರೆ ಪಾಂಡುರಾಜನನೆ ಕುಂತಿ ಮನಂಬುಗೆ ಮಾಲೆ ಸೂಡಿದಳ್

ವಚನ

ಅಂತು ಸ್ವಯಂಬರದೊಳ್ ನೆರೆದರಸುಮಕ್ಕಳೊಳಪ್ಪುಕೆಯ್ದ ಕುಂತಿಯೊಡನೆ ಮದ್ರರಾಜನ ಮಗಳ್ ಶಲ್ಯನೊಡವುಟ್ಟಿದ ಮಾದ್ರಿಯುಮನೊಂದೆ ಪಸೆಯೊಳಿರಿಸಿ ಗಾಂಗೇಯಂ ವಿಧಾತ್ರಂ ಮುಂಡಾಡುವಂತೆ ತಾಂ ಮದುವೆಯಂ ಮಾಡಿ-

ಚಂಪಕಮಾಲೆ

ತಳಿರ್ಗಳಸಂ ಮುಕ್ಕುಂದರವಮೆತ್ತಿದ ಮುತ್ತಿನ ಮಂಟಪಂ ಮನಂಗೊಳಿಪ ವಿತಾನಪಙ್ಕ್ತಿ ಪಸುರ್ವಂದಲಳೊಲ್ದೆಡೆಯಾಡುರೆಯ್ದೆಯರ್ ಬಳಸಿದ ವೇದಪಾರಗರ ಸಂದಣಿಯೆಂಬಿವಱಿಂ ವಿವಾಹಮಂಗಳಮದು ಕುಂತಿ ಮಾದ್ರಿಗಳೊಳಚ್ಚರಿಯಾದುದು ಪಾಂಡುರಾಜನಾ

ಚಂಪಕಮಾಲೆ

ತುಱುಗೆಮೆ ನೀಳ್ದ ಪುರ್ವು ನಿಡುಗಣ್ ಪೊರೆಯಲ್ಲದೆ ಬಟ್ಟಿತಪ್ಪ ಬಾಯ್ದೆರೆ, ತನು ರೇಖೆಗೊಂಡ ಕೊರಲೊಡ್ಡಿದ ಪೆರ್ಮೊಲೆ ತೆಳ್ವಸಿಱು ಕರಂ ನೆರೆದ ನಿತಂವಿಂಬಮಿಂಬುವಡೆದೊಳ್ದೊಡೆ ನಕ್ಕರವದ್ದಿ ತಾನೆ ಪೋಕಿಱುದೊಡೆಯೆಂದು ಧಾತ್ರಿ ಪೊಗೞ್ಗುಂ ಪೊಗೞ್ವನ್ನರೆ ಕುಂತಿ ಮಾದ್ರಿಗಳ್

ವಚನ

ಅಂತಾಕೆಗಳಿರ್ವರುಮೆರಡುಂ ಕೆಲದೊಳಿರೆ ಕಲ್ಪಲತೆಗಳೆರಡಱ ನಡುವಣ ಕಲ್ಪವೃಕ್ಷ ಮಿರ್ಪಂತಿರ್ದ ಪಾಂಡುರಾಜಂಗೆ ಧೃತರಾಷ್ಟ್ರನಂಗಹೀನೆಂದು ವಿವಾಹದೊಸಗೆಯೊಡನೆ ಪಟ್ಟಬಂಧದೊಸಗೆಯಂ ಮಾಡಿ ನೆಲನನಾಳಿಸೆ-

ಉತ್ಪಲಮಾಲೆ

ಮೀಱುವೆರೆಂಬ ಮಾಂಡಳಿಕರೀಯದರೆಂಬದಟರ್ ವಯಲ್ಗೆ ಮೆಯ್ದೋಱುರೆವೆಂಬ ಪೂಣಿಗರಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾಯ್ಪಾಱೆ ನಭಕ್ಕೆ ಪಾಱಿದುದು ಗಂಡರ ನೆತ್ತಿಯೊಳೆತ್ತಿ ಬಾಳನಿನ್ನೂಱುಗುಮೆಂದೊಡೇಂ ಪಿರಿದೊ ತೇಜದ ದಳ್ಳುರಿ ಪಾಂಡುರಾಜನಾ

ಮತ್ತೇಭವಿಕ್ರೀಡಿತ

ಬೆಸಕೆಯ್ದತ್ತು ಸಮುದ್ರಮುದ್ರಿತಧರಾಚಕ್ರಂ ಪ್ರತಾಪಕ್ಕಗುರ್ವಿಸೆ ಗೋಳುಂಡೆಗೊಳುತ್ತುಮಿರ್ದುದು ದಿಶಾಚಕ್ರಂ ಪೊzೞ್ದಾಜ್ಞೆಗಂ ಪೆಸರ್ಗಂ ಮುನ್ನಮೆ ರೂಪುವೋದುದು ವಿಯಚ್ಚಕ್ರಂ ಸಮಂತೆಂಬಿನಂಜಸಮಾ ಪಾಂಡುರಮಾದುದಾ ನೃಪರೊಳಾರಾ ಪಾಂಡುರಾಜಂಬರಂ

ಪಾಂಡುರಾಜನು ಶಾಪಗ್ರಸ್ತನಾಗಿ ವಾನಪ್ರಸ್ತಕ್ಕೆ ಹೋದುದು
ವಚನ

ಅಂತು ಪಾಂಡುರಾಜನಧಿಕತೆಜನುಮವನತವೈರಿಭೂಭೃತ್ಸಮಾಜನುಮಾಗಿ ನೆಗೞುತ್ತಿರ್ದೊಂದು ದಿವಸಂ ತೋಪಿನ ಬೇಂಟೆಯನಾಡಲೞ್ತಿಯಿಂ ಪೋಗಿ-

ಚಂಪಕಮಾಲೆ

ಇನಿಯಳನೞ್ತಿಯಿಂದೆ ಮೃಗಿ ಮಾಡಿ ಮನೋಜಸುಖಕ್ಕೆ ಸೋಲ್ತಲಂಪಿನೆ ನೆರೆಯಲ್ಕೆ ದಿವ್ಯಮುನಿಯುಂ ಮೃಗಮಾಗಿ ಮರಲ್ದು ಕೂಡೆ ಮೆ ಲ್ಲನೆ ಮೃಗಮೆಂದು ಸಾರ್ದು ನೆಱನಂ ನಡೆ ನೋಡಿ ನರೇಂದ್ರನೆಚ್ಚು ಭೋಂಕನೆ ಮೃಗಚಾರಿಯಂ ತನಗೆ ಮಾಣದೆ ತಂದನದೊಂದು ಮಾರಿಯಂ

ವಚನ

ಆಗಳ್ ಪ್ರಳಯದುಳ್ಕಮುಳ್ಕುವಂತೆ ತನ್ನೆಚ್ಚಂಬು ಮುನಿಕುಮಾರನ ಕಣ್ಣೊಳಮೆರ್ದೆಯೊಳಮುಕ್ಕೆ ಪೇೞಿಮೆನ್ನನಾವನೆಚ್ಚನೆಂಬ ಮುನಿದು ಮುನಿದ ಸರಮಂ ಕೇಳ್ದು ಬಿಲ್ಲನಂಬುಮನೀಡಾಡಿ ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ-

ಉತ್ಪಲಮಾಲೆ

ಸನ್ನತದಿಂ ರತಕ್ಕೆಳಸಿ ನಲ್ಲಳೊಳೋತೊಡಗೂಡಿದೆನ್ನನಿಂತನ್ನಯ ಮೆಚ್ಚುದರ್ಕೆ ಪೆಱತಿಲ್ಲದು ದಂಡಮೊಱಲ್ದು ನಲ್ಲಳೊಳ್ ನೀನ್ನಡೆನೊಡಿಯುಂ ಬಯಸಿ ಕೂಡಿಯುಮಾರಡೆ ಸಾವೆಯಾಗಿ ಪೋಗಿನ್ನೆನೆ ರೌದ್ರಶಾಪಪರಿತಾಪವಿಳಾಪದೊಳಾ ಮಹೀಶ್ವರಂ

ವಚನ

ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದಲ್ತು

ಕಂದ

ಎತ್ತ ವನಮೆತ್ತ ಮೃಗಯಾವೃತ್ತಕವೀ ತಪಸಿಯೆತ್ತ ಮೃಗಮೆಂದೆಂತಾನೆತ್ತೆಚ್ಚೆನಾತ್ಮಕರ್ಮಾಯತ್ತಂ ಪೆಱತಲ್ತಿದೆಲ್ಲಮಘಟಿತಘಟಿತಂ

ವಚನ

ಎಂದು ಚಿಂತಿಸುತ್ತುಂ ಪೊೞಲ್ಗೆ ಮಗುೞ್ದುವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ವೃತ್ತಾಂತಮೆಲ್ಲಮಂ ಪೇೞ್ದು ಸಮಸ್ತವಸ್ತುಗಳಂ ದೀನಾನಾಥಜನಂಗಳ್ಗೆ ಸೂಗೊಟ್ಟು ನಿಜಪರಿರಾರಮಂ ಬರಿಸಿ-

ಉತ್ಪಲಮಾಲೆ

ಸಾರಮನಂಗ ಜಂಗಮಲತಾ ಲಲಿತಾಂಗಿಯರಿಂದಮಲ್ತೆ ಸಂಸಾರಮಿದೆಂಬುದಿನ್ನೆನಗೆ ತಪ್ಪುದು ತನ್ಮುನಿ ಶಾಪದಿಂದಿಮಿನ್ನಾರುಮಿದರ್ಕೆ ವಕ್ರಿಸದಿರಿಂ ವನವಾಸದೊಳಿರ್ಪೆನೆಂದು ದುರ್ವಾರ ಪರಾಕ್ರಮಂ ತಳರೆ ಬಾರಿಸಿವಾರಿಸಿ ಕುಂತಿ ಮಾದ್ರಿಯರ್

ವಚನ

ಬೆನ್ನ ಬೆನ್ನನೆ ಬರೆ ಚಿನ್ನ ಬಿನ್ನನೆ ಪೋಗಿ-

ಖಚರಪ್ಲುತ

ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀಭಂಗಮಂ ಮಣಿಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋತ್ತುಂಗಮಂ ಮುನಿಮುಖ್ಯಮುಖಾಂಭೋಜೋದರ ನಿರ್ಗತಮಂತ್ರ ಪೂತಾಂಗಮಂ ನೃಪನೆಯ್ದಿದನುದ್ಯಚ್ಛೃಂಗಮನಾ ಶತಶೃಂಗಮಂ

ವಚನ

ಆ ಪರ್ವತದ ವಿಪುಳ ವನೋಪಕಂಠಗಳೊಳ್ ತಾಪಸಕನ್ಯೆಯರ್ ನಡಪಿದೆಳಲತೆಗಳೊಳೆಱಗಿ ತುಱುಗಿ ಸಾಮವೇದಧ್ವನಿಯೊಳ್ ಮೊರೆವ ತುಂಬಿಗಳುಮಂ ಪಣ್ತೆಱಗಿದ ತದಾಶ್ರಮದ ತರುಗಳ ಮೇಗಿರ್ದು ಪುಗಿಲ್ ಪುಗಿಲೆಂದಿತ್ತ ಬನ್ನಿಮಿರಿಮೆಂಬ ಪೊಂಬಣ್ಣದ ಕೋಗಿಲೆಗಳುಮಂ ಮುನಿಕುಮಾರರೋದುವ ವೇದವೇದಾಂಗಂಗಳಂ ತಪ್ಪುವಿಡುದು ಜಡಿದು ಬಗ್ಗಿಸುವ ಪದುಮರಾಗದ ಬಣ್ಣದರಗಿಳಿಗಳುಮಂ ಸುರಭಿಗಳ ತೊರೆದ ಮೊಲೆಗಳನುಣ್ಬವಱ ಮಱಿಗಳಂ ಪೋಗೆ ನೂಂಕಿ ಕೂಂಕಿ ಮೊಲೆಗಳನುಣ್ಬ ಕಿಶೋರ ಕೇಸರಿಗಳುಮಂ ತಮ್ಮೊಡನೆ ನಲಿದಾಡುವ ಕಿಶೋರಕೇಸರಿಗಳಂ ಪಿಡಿದು ತೆಗೆವ ಕರಿಕಳಭಂಗಳುಮನಾಗಳಾಪಳುವಂಗಳಿಂದೆ ಪಾಯ್ವ ಪುಲಿಗಳ ಮಱಿಗಳೊಳ್ ಪರಿದಾಡುವ ತರುಣ ಹರಿಣಂಗಳುಮಂ ಮತ್ತಂ ಮುತ್ತ ಕುರುಡತವಸಿಗಳ ಕೈಯಂ ಪಿಡಿದುಯ್ದವರ ಗುಹೆಗಳಂ ಪುಗಿಪ ಪೊಱಮಡಿಪ ಚಪಳ ಕಪಿಗಳುಮಂ ಹೋಮಾಗ್ನಿಯನೆಱಂಕೆಯ ಗಾಳಿಯಿಂ ನಂದಲೀಯದುರಿಪುವ ರಾಜಹಂಸೆಗಳುಮಂ ಮುನಿಗಣೀಶ್ವರರೊಡನೆ ದಾಳಿವೂಗೊಯ್ವೊಡನೆವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರದ ತಪೋಧನರದ ತಪಪ್ರಭಾವಕ್ಕೆ ಚೋದ್ಯಂಬಟ್ಟು-

ಚಂಪಕಮಾಲೆ

ವಿನಯದಿನಿತ್ತ ಬನ್ನಿಮಿರಿಮೆಂಬವೊಲಿಂಚರದಿಂದಮೊಯ್ಯನೊಯ್ಯನೆ ಮಱಿದುಂಬಿಗಳ್ ಮೊರೆವುವೞ್ಕಱೊಳೊಲ್ದೆಱಪಂತೆ ತಳ್ತ ಪೂವಿನ ಪೊಸ ಗೊಂಚಲಿಂ ಮರನಿದೇನೆಸೆದಿರ್ದುವೊ ಕಲ್ತುವಾಗದೇವಿನಯಮನೀ ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರದಾ

ವಚನ

ಎಂದು ಮೆಚ್ಚುತ್ತುಮೆನಗೆ ನೆಲಸಿರಲೀ ತಪೋವನಮೆ ಪಾವನಮೆಂದು ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ ಕಾಮಾನುರಾಗಮಂ ಬೆರ್ಚಿಸಿ ತದಾಶ್ರಮದೊಳಾಶ್ರಮಕ್ಕೆ ಗುರುವಾಗೆ ಪಾಂಡುರಾಜನಿರ್ಪನ್ನೆಗಮಿತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ಮಕ್ಕಳಂ ಪಡೆವಂತು ಪರಾಶರಮುನೀಂದ್ರನೊಳ್ ಬರಂಬಡೆದಳೆಂಬುದಂ ಕುಂತಿ ಕೇಳ್ದು ತಾನುಂ ಪುತ್ರಾರ್ಥಿನಿಯಾಗಲ್ ಬಗೆದು-

ಚಂಪಕಮಾಲೆ

ವಿಸಸನದೊಳ್ ವಿರೋಧಿನೃಪರಂ ತಱಿದೊಟ್ಟಲುಮರ್ಥಿಗರ್ಥಮಂಕಸವಿನ ಲೆಕ್ಕಮೆಂದು ಕುಡಲುಂ ವಿಪುಳಾಯತಿಯಂ ದಿಗಂತದೊಳ್ಪಸರಿಸಲುಂ ಕರಂ ನೆಱೆವ ಮಕ್ಕಳನೀಯದೆ ನೋಡೆ ನಾಡೆ ನೋಯಸಿದಪುದಿಕ್ಷುಪುಷ್ಪದವೊಲೆನ್ನಯ ನಿಷ್ಫಲ ಪುಷ್ಪದರ್ಶನಂ

ವಚನ

ಎಂದು ಚಿಂತಾಕ್ರಾಂತೆಯಾಗಿರ್ದ ಕುಂತಿಯಂ ಕಂಡು ಪಾಂಡುರಾಜನೇಕಾಂತದೊಳಿಂತೆಂದಂ-

ಉತ್ಪಲಮಾಲೆ

ಚಿಂತೆಯಿದೇನೊ ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡಿನ್ನಿಂತಿರವೇಡ ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ ನಿಜಾತ್ಯಂತ ಪತಿವ್ರತಾಗುಣದಿನರ್ಚಿಸಿ ಮೆಚ್ಚಿಸು ನೀಂ ದಿಗಂತ ವಿಶ್ರಾಂತ ಯಶರ್ಕಳಂ ವರ ತನೂಭವರಂ ಪಡೆ ನೀಂ ತಳೋದರೀ

ಧರ್ಮಜನ ಜನನ
ವಚನ

ಎಂದೊಡೆ ಕೊಂತಿಯಿಂತೆಂದಳೆನ್ನ ಕನ್ನಿಕೆಯಾ ಕಾಲದೊಳ್ ನಾನೆನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾಮುನಿಯರೆಮ್ಮ ಮನೆಗೆ ನಿಚ್ಚಕ್ಕಂ ಬರ್ಪರವರೆನ್ನ ವಿನಯಕ್ಕಂ ಭಕ್ತಿಗಂ ಬೆಸಕೆಯ್ವುದರ್ಕಂ ಮೆಚ್ಚಿ ಮಂತ್ರಾಕ್ಷರಂಗಳನಯ್ದಂ ವರವಿತ್ತರೀಯಯ್ದು ಮಂತ್ರಕಯ್ವರ್ಮಕ್ಕಳಂ ನಿನ್ನ ಬಗೆಗೆ ಬಂದವರನಾಹ್ವಾನಂ ಗೆಯ್ಯಲವರ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೀಗಳೆನ್ನ ಪುಣ್ಯದಿಂ ದೊರೆಕೊಂಡು ದೊಳ್ಳಿತ್ತೆಂಬುದಂ ದಿವ್ಯಮುನಿವಾಕ್ಯಮಮೋಘವಾಕ್ಯಮಕ್ಕುಮದರ್ಕೇನುಂ ಚಿಂತಿಸಲ್ವೇಡ ಎಂದೊಡಂತೆ ಗೆಯ್ವೆನೆಂದು ತೀರ್ಥಜಲಂಗಳಂ ಮಿಂದು ದಳಿಂಬವನುಟ್ಟು ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನದೊಳಿರ್ದು-

ಉತ್ಪಲಮಾಲೆ

ಜ್ಞಾನದಿನಿರ್ದು ನಿಟ್ಟಿಪೊಡೆ ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂತಾನಮನೋದಿಯೋದಿ ಯಮರಾಜನನದ್ಭುತತೇಜನಂ ಸರೋಜಾನನೆ ಜಾನದಿಂ ಬರಿಸೆ ಬಂದು ಯಮಂ ಬೆಸನಾವುದಾವುದಾತ್ಮಾನುಗತಾರ್ಥಮೆಂದೊಡನಗೀವುದು ನಿನ್ನನೆ ಪೋಲ್ವ ಪುತ್ರನಂ

ವಚನ

ಎಂಬುದುಂ ತಥಾಸ್ತುವೆಂದು ತನ್ನಂಶಮನಾಕೆಯ ಗರ್ಭದೊಳವತರಿಸಿ ಯಮಭಟ್ಟಾರಕನಂತರ್ಧಾನಕ್ಕೆ ಸಂದನನ್ನೆಗಮಾ ಕಾಂತೆಗೆ-

ಚಂಪಕಮಾಲೆ

ಹಿಮ ಧವಳಾತಪತ್ರಮನೆ ಪೋಲೆ ಮುಖೇಂದುವ ಬೆಳ್ಪು ಪೂರ್ಣ ಕುಂಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪು ಪತಾಕೆಯೊಂದು ವಿಭ್ರಮಮನೆ ಪೋಲೆ ಪುರ್ವಿನ ಪೊಡರ್ಪೊಳಕೊಂಡುದವಳ್ಗೆ ಗರ್ಭ ಚಿಹ್ನಮೆ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ

ವಚನ

ಅಂತು ಕೊಂತಿಯ ಗರ್ಭಭಾರಮುಂ ತಾಪಸಾಶ್ರಮದನುರಾಗಮುಮೊಡನೊಡನೆ ಬಳೆಯೆ ಬಂಧುಜನದ ಮನೋರಥಂಗಳು ಮೊಂಬತ್ತನೆಯ ತಿಂಗಳುಮೊಡನೊಡನೆ ನೆರೆಯೆ-

ಕಂದ

ವನನಿಧಿಯಿಂದಂ ಚಂದ್ರಂವಿನತೋದರದಿಂ ಗರುತ್ಮನುದಯಾಚಳದಿಂದಿನಪನೊಗೆವಂತೆ ಪುಟ್ಟಿದನನಿವಾರ್ಯ ಸುತೇಜನೆನಿಪನಿನಜನ ತನಯಂ

ಕಂದ

ಪುಟ್ಟುವುದುಂ ಧರ್ಮಮುಮೊಡವುಟ್ಟಿದುದೀತನೊಳೆ ಧರ್ಮನಂಶದೊಳೀತಂಪುಟ್ಟಿದನೆಂದಾ ಶಿಶುಗೊಸೆದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಪೆಸರುಂ

ವಚನ

ಅಂತು ಪೆಸರನಿಟ್ಟು ಪರಕೆಯಂ ಕೊಟ್ಟು-

ಕಂದ

ಸಂತಸದಿನಿರ್ದು ಮಕ್ಕಳಸಂತತಿಗೀ ದೊರೆಯರಿನ್ನುಮಾಗದೊಡೆಂತುಂಸಂತಸಮೆನಗಿಲ್ಲೆಂದಾಕಾಂತೆ ಸುತಭ್ರಾಂತೆ ಮುನ್ನಿನಂತೆವೊಲಿರ್ದಳ್

ಭೀಮನ ಜನನ
ಕಂದ

ಮಂತ್ರಾಕ್ಷರ ನಿಯಮದಿನಭಿಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದೇಂಮಂತ್ರಂ ಪೇೞೆನೆ ಕುಡು ರಿಪುತಂತ್ರಕ್ಷಯಕರನನೆನಗೆ ಹಿತನಂ ಸುತನಂ

ವಚನ

ಎಂಬುದುಮದೇವಿರಿದಿತ್ತೆನೆಂದು ವಿಯತ್ತಳಕ್ಕೊಗೆದೊಡಾತನಂಶಮಾಕೆಯ ಗರ್ಭ ಸರೋವರದೊಳಗೆ ಚಂದ್ರಬಿಂಬದಂತೆ ಸೊಗಯಿಸೆ-

ಚಂಪಕಮಾಲೆ

ತ್ರಿವಳಿಗಳುಂ ವಿರೋಧಿ ನೃಪರುತ್ಸವಮುಂ ಕಿಡೆವಂದುವಾನನೇಂದುವ ಕಡುವೆಳ್ಪು ಕೂಸಿನ ನೆಗೞ್ತೆಯ ಬೆಳ್ಪುವೊಲಾಯ್ತು ಮುನ್ನೆ ಬಳ್ಕುವ ನಡು ತೋರ್ಪ ಮೆಯ್ಯನೊಳಕೊಂಡುದು ಪೊಂಗೊಡನಂ ತಮಾಳ ಪಲ್ಲವದೊಳೆ ಮುಚ್ಚಿದಂದದೊಳೆ ಚೂಚುಕಮಾಂತುದು ಕರ್ಪನಾಕೆಯಾ

ಕಂದ

ಆ ಸುದತಿಯ ಮೃದು ಪದ ವಿನ್ಯಾಸಮುಮಂ ಶೇಷನಾನಲಾರದೆ ಸುಯ್ದಂಬೇಸಱಿನೆಂದೊಡೆ ಗರ್ಭದಕೂಸಿನ ಬಳೆದಳವಿಯಳವನಳೆವರುಮೊಳರೇ

ವಚನ

ಅಂತು ಗರ್ಭನಿರ್ಭರ ಪ್ರದೇಶದೊಳರಾತಿಗಳ್ಗಂತಕಾಲಂ ದೊರೆಕೊಳ್ವಂತೆ ಪ್ರಸೂತಿ ಕಾಲಂ ದೊರೆಕೊಳೆ-

ಕಂದ

ಶುಭ ತಿಥಿ ಶುಭ ನಕ್ಷತ್ರಂಶುಭ ವಾರಂ ಶುಭ ಮುಹೂರ್ತಮೆನೆ ಗಣಕನಿಳಾಪ್ರಭುವೊಗೆದನುದಿತ ಕಾಯಪ್ರಭೆಯೊಗೆದಿರೆ ದಳಿತ ಶತ್ರುಗೋತ್ರಂ ಪುತ್ರಂ

ಕಂದ

ಭೀಮಂ ಭಯಂಕರಂ ಪೆಱತೇ ಮಾತೀ ಕೂಸಿನಂದವೀತನ ಪೆಸರುಂಭೀಮನೆ ಪೋಗೆನೆ ಮುನಿಜನವೀ ಮಾೞ್ಕೆಯಿನಾಯ್ತು ಶಿಶುಗೆ ಪೆಸರನ್ವರ್ಥಂ

ದುರ್ಯೋಧನಾದಿ ಕೌರವರ ಜನನ
ವಚನ

ಅಂತು ಭರತಕುಲತಿಲಕರಪ್ಪಿರ್ವರ್ಮಕ್ಕಳಂ ಪೆತ್ತು ಕೊಂತಿ ಸಂತಸದಂತ ಮನೆಯ್ದಿರ್ಪುದುಮತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ಕೇಳ್ದು ತನ್ನ ಗರ್ಭಂ ತಡೆದುದರ್ಕೆ ಕಿನಿಸಿ ಕಿಂಕಿರಿವೋಗಿ-

ಕಂದ

ಸಂತತಿಗೆ ಪಿರಿಯ ಮಕ್ಕಳನಾಂ ತಡೆಯದೆ ಪಡೆವೆನೆಂದೊಡೆನ್ನಿಂ ಮುನ್ನಂಕೊಂತಿಯೆ ಪಡೆದಳ್ ಗರ್ಭದಚಿಂತೆಯದಿನ್ನೇವುದೆಂದು ಬಸಿಱಂ ಪೊಸೆದಳ್

ಕಂದ

ಪೊಸೆದೊಡೆ ಪಾಲ್ಗಡಲಂ ಮಗುೞ್ದಸುರರ್ ಪೊಸೆದಲ್ಲಿ ಕಾಳಕೂಟಾಂಕುರಮಂದಸದಳಮೊಗೆದಂತೊಗೆದುವುಬಸಿಱಿಂ ನೂಱೊಂದು ಪಿಂಡಮರುಣಾಕೀರ್ಣಂ

ವಚನ

ಅವಂ ಕಂಡು ಕಿನಿಸಿ ಪರ್ಚೆೞ್ದೆವೆಲ್ಲವಂ ಪೊಱಗೆ ಬಿಸುಟು ಬನ್ನಿಮೆಂಬುದುಂ ವ್ಯಾಸಭಟ್ಟಾರಕಂ ಬಂದು ಗಾಂಧಾರಿಯಂ ಬಗ್ಗಿಸಿ-

ಚಂಪಕಮಾಲೆ

ಒದವುಗೆ ನಿನ್ನ ಸಂತತಿಗೆ ನೂರ್ವರುದಗ್ರ ಸುತರ್ಕಳೊಂದೆ ಗರ್ಭದೊಳೆನೆ ಕೆಮ್ಮನಿಂತು ಪೊಸೆದಿಕ್ಕಿದೆ ಪೊಲ್ಲದುಗೆಯ್ದೆಯೆಂದು ಮಾಣದೆ ಮುನಿ ನೂಱುಪಿಂಡಮುಮನಾಗಳೆ ತೀವಿದ ಕಮ್ಮನಪ್ಪ ತುಪ್ಪದ ಕೊಡದೊಳ್ ಸಮಂತು ಮಡಗಿಟ್ಟೊಡೆ ಸೃಷ್ಟಿಗೆ ಚೋದ್ಯಮಪ್ಪಿನಂ

ವಚನ

ಅಂತು ನೂರ್ವರೊಳೊರ್ವನಗುರ್ಬು ಪರ್ಬಿ ಪರಕಲಿಸೆ ಸಂಪೂರ್ಣ ವಯಸ್ಕನಾಗಿ ಘೃತಘಟವಿಘಟನುಮಾಗೆ ಪುಟ್ಟುವುದುಂ-

ಕಂದ

ಪ್ರತಿಮೆಗಳೞ್ತುವು ಮೊೞಗಿದುದತಿ ರಭಸದೆ ಧಾತ್ರಿ ದೆಸೆಗಳುರಿದುವು ಭೂತಪ್ರತತಿಗಳಾಡಿದುವೊಳಱಿದುವತಿ ರಮ್ಯಸ್ಥಾನದೊಳ್ ಶಿವಾ ನಿವಹಂಗಳ್

ವಚನ

ಅಂತೊಗೆದನೇಕೋತ್ಪಾತಂಗಳಂ ಕಂಡು ಮುಂದಱಿವ ಚದುರ ವಿದುರನಿಂತೆಂದಂ-

ಕಂದ

ಈತನೆ ನಮ್ಮ ಕುಲಕ್ಕಂಕೇತು ದಲಾನಱಿವೆನಲ್ಲದಂದೇಕಿನಿತುತ್ಪಾತಂ ತೋರ್ಪುವು ಬಿಸುಡುವುದೀತನ ಪೆಱಗುೞಿದ ಸುತರೆ ಸಂತತಿಗಪ್ಪರ್

ವಚನ

ಎಂದೊಡಂ ಪುತ್ರಮೋಹ ಕಾರಣಮಾಗಿ ಧೃತರಾಷ್ಟ್ರನುಂ ಗಾಂಧಾರಿಯುಮೇಗೆಯ್ದುಮೊಡಂಬಡದಿರ್ದೊಡುತ್ಪಾತ ಶಾಂತಿಕ ಪೌಷ್ಟಿಕ ಕ್ರಿಯೆಗಳಂ ಮಹಾ ಬ್ರಾಹ್ಮಣರಿಂದಂ ಬಳೆಯಿಸಿ ಬದ್ದವಣಮಂ ಬಾಜಿಸಿ ಮಂಗಳಮಂ ಪಾಡಿಸಿ ಕೂಸಿಂಗೆ ದುರ್ಯೋಧನನೆಂದು ಪೆಸರನಿಟ್ಟು ಮತ್ತಿನ ಕೂಸುಗಳ್ಗೆಲ್ಗಂ ದುಶ್ಶಾಸನಾದಿಯಾಗಿ ನಾಮಂಗಳನಿಟ್ಟು ಪರಕೆಯಂ ಕೊಟ್ಟು-

ಕಥಾನಾಯಕ ಅರ್ಜುನನ ಜನನ
ಮತ್ತೇಭವಿಕ್ರೀಡಿತ

ಸುಕಮಿರ್ಪನ್ನೆಗಮಿತ್ತ ಕುಂತಿ ಶತಶೃಂಗಾದ್ರೀಂದ್ರದೊಳ್ ದಿವ್ಯ ಬಾಲಕನಿನ್ನೊರ್ವನನುಗ್ರವೈರಿ ಮದವನ್ಮಾತಂಗ ಕುಂಭಾರ್ದ್ರ ಮೌಕ್ತಿಕ ಲಗ್ನೋಜ್ಜ ಲ ಬಾಣನಂ ಪ್ರವಿಲಸದ್ಗೀರ್ವಾಣ ದಾತವ್ಯ ಸಾಯಕ ಸಂಪೂರ್ಣ ಕಳಾಪ್ರವೀಣನನಿಳಾಭಾರ ಕ್ಷಮಾಕ್ಷೂಣನಂ

ವಚನ

ಅಂತು ಸರ್ವ ಲಕ್ಷಣ ಸಂಪೂರ್ಣನಪ್ಪ ಮಗನನಮೋಘಂ ಪಡೆವೆನೆಂಬುದ್ಯೋಗಮನೆತ್ತಿಕೊಂಡು ಪಾಂಡುರಾಜನಂ ತಾನುಂ-

ಚಂಪಕಮಾಲೆ

ಎಱಗಿಯುಮೊರ್ಮೆ ದಿವ್ಯ ಮುನಿಗಾರ್ತುಪವಾಸಮನಿರ್ದುಮೊರ್ಮೆ ಕೊಯ್ದಱಿಕೆಯ ಪೂಗಳಿಂ ಶಿವನನರ್ಚಿಸಿಯುಂ ಬಿಡದೊರ್ಮೆ ನೋಂತುಮೋದಱಿವರ ಪೇೞ್ದ ನೋಂಪಿಗಳನೊರ್ಮೆ ಪಲರ್ಮೆಯುಮಿಂತು ತಮ್ಮ ಮೆಯ್ಮರೆವಿನಮಿರ್ವರುಂ ನಮೆದರೇನವರ್ಗಾದುದೊ ಪುತ್ರದೋಹಳಂ

ಚಂಪಕಮಾಲೆ

ಆಲಸದೆ ಮಾಡಿ ಬೇಸಱದೆ ಸಾಲ್ಗುಮಿದೆನ್ನದೆ ಮೆಯ್ಸೊಗಕ್ಕೆ ಪಂಬಲಿಸದೆ ನಿದ್ದೆಗೆಟ್ಟು ನಿಡು ಜಾಗರದೊಳ್ ತೊಡರ್ದೇಕ ಪಾದದೊಳ್ಬಲಿದುಪವಾಸದೊಳ್ ನಮೆದು ನೋಂಪಿಗಳೊಳ್ ನಿಯಮ ಕ್ರಮಂಗಳಂಸರಿಸಿದರಂತು ನೋನದೆ ಗುಣಾರ್ಣವನಂ ಪಡೆಯಲ್ಕೆ ತೀರ್ಗುಮೇ

ವಚನ

ಅಂತೊಂದು ವರ್ಷಂಬರಂ ಭರಂಗೆಯ್ದು ನೋಂತು ಪೂರ್ವಕ್ರಮದೊಳೊಂದುದಿವಸಮುಪವಾಸಮನಿರ್ದಗಣ್ಯ ಪುಣ್ಯತೀರ್ಥ ಜಲಂಗಳಂ ಮಿಂದು ದಳಿಂಬಮನುಟ್ಟು ದರ್ಭಶಯನದೊಳಿರ್ದು-

ಮತ್ತೇಭವಿಕ್ರೀಡಿತ

ಸುಲಿಪಲ್ ಮಿಂಚಿನ ಗೊಂಚಲುಟ್ಟ ದುಗುಲಂ ಗಂಗಾನದೀ ಪೇನಮುಜ್ಜ ಲ ಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಮಂಗಲತಾ ಲಾಲಿತ ಸಾಂದ್ರ ಚಂದನರಸಂ ಬೆಳ್ದಿಂಗಳೆಂಬೊಂದು ಪಂಬಲ ಬಂಬಲ್ಗೆಡೆಯಾಗೆ ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ

ವಚನ

ಅಂತು ತನ್ನ ಕೈಕೊಂಡು ಬೆಳ್ಪಸದನದೊಳ್ ಕೀರ್ತಿಶ್ರೀಯಂ ವಾಕ್ಶ್ರೀಯುಮನನುಕರಿಸಿ ಮಂತ್ರಾಕ್ಷರ ನಿಯಮದೊಳಿಂದ್ರನಂ ಬರಿಸೆ-

ಕಂದ

ನೆನೆದ ಮನಂ ಪೆಱಗುೞಿದತ್ತೆನೆ ಬೆಳಗುವ ರತ್ನದೀಪ್ತಿ ಸುರಧನು ನೆಗೆದತ್ತೆನೆ ನೆಯ್ದಿಲ್ಗೊಳನಲರ್ದತ್ತೆನೆ ಕಣ್ಗಳ ಬಳಗಮಾಗಳಿಂದ್ರಂ ಬಂದಂ

ಕಂದ

ಬೆಸನೇನೇಗೆಯ್ವುದೊ ನಿನಗೊಸೆದೇನಂ ಕುಡುವುದೆಂದೊಡೆಂದಳ್ ಮಕ್ಕಳ್ಒಸಗೆಯನೆನಗೀವುದು ನಿನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ

ವಚನ

ಎಂಬುದುಮಾಕೆಯ ಬಗೆದ ಬಗೆಯೊಳೊಡಂಬಡುವಂತೆ ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮನಾದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ ಮದನನ ಸೌಭಾಗ್ಯಮುಮಂ ಕಲ್ಪತರುವಿನುದಾರಶಕ್ತಿಯುಮನೀಶ್ವರನ ಪ್ರಭುಶಕ್ತಿಯುಮಂ ಜವನ ಬಲ್ಲಾಳ್ತನಮುಮಂ ಸಿಂಹದ ಕಲಿತನಮುಮನವರವರ ದೆಸೆಗಳಿಂ ತೆಗೆದೊಂದುಮಾಡಿ ಕೊಂತಿಯ ದಿವ್ಯಗರ್ಭೋದರಮೆಂಬ ಶುಕ್ತಿಕಾಪುಟೋದರದೊಳ್ ತನ್ನ ದಿವ್ಯಾಂಶಮೆಂಬ ಮುಕ್ತಾಫಲೋದ ಬಿಂದುವನಿಂದ್ರಂ ಸಂಕ್ರಮಿಸಿ ನಿಜನಿವಾಸಕ್ಕೆ ಪೋದನನ್ನೆಗಮಿತ್ತ ಕೊಂತಿಯುಮಂದಿನ ಬೆಳಗಪ್ಪ ಜಾವದೊಳ್ ಸುಖನಿದ್ರೆಯಾಗಿ-

ಚಂಪಕಮಾಲೆ

ಕುಡಿವುದನೇೞುಮಂಬುಯುಮಂ ಕುಲಶೈಲಕುಳಂಗಳಂ ತಗುಳ್ದಡರ್ವುದನೊಂದು ಬಾಳ ರವಿ ತನ್ನಯ ಸೋಗಿಲ ಮೇಗೆ ರಾಗದಿಂಪೊಡರ್ವುದನಂತೆ ದಿಕ್ಕರಿಗಳಂಬುಜಪತ್ರ ಪುಟಾಂಬುವಿಂ ಬೆಡಂಗಡಸಿರೆ ಮಜ್ಜನಂಬುಗಿಪುದಂ ಸತಿ ಕಂಡೊಸೆದಳ್ ನಿಶಾಂತದೊಳ್

ವಚನ

ಅಂತು ಕಂಡು ಮುನಿಕುಮಾರರೋದುವ ವೇದನಿನಾದದಿಂ ವಿಗತ ನಿದ್ರೆಯಾಗಿ ಪಾಂಡುರಾಜಂಗಮಲ್ಲಿಯ ಮುನಿಜನಂಗಳ್ಗ ಮಱಿಪಿದೊಡವರಾ ಕನಸುಗಳ್ಗೆ ಸಂತೋಷಂಬಟ್ಟು-

ಚಂಪಕಮಾಲೆ

ಕುಡಿವುದಱಂದಮಭ್ಧಿಗಳನಬ್ಧಿಪರೀತ ಮಹೀಶನಂ ತಗುಳ್ದಡರ್ವುದಱಿಂ ಕುಲಾದ್ರಿ ಪರಿವೇಷ್ಟಿತನಂ ತರುಣಾರ್ಕನೞ್ಕಱಿಂಪೊಡರ್ವುದಱಿಂದಮೆಂದುಮುದಿತೋದಿತನಂ ದಿಗಿಭಂಗಳೆಂಟುಮೊಳ್ಪೊಡರಿಸಿ ಮಜ್ಜನಂಬುಗಿಸೆ ಕಂಡುದಱಿಂ ಕಮಲಾಭಿರಾಮನಂ

ವಚನ

ಇಂತಪ್ಪ ಮಗನಂ ನೀನಮೋಘಂ ಪಡೆವೆಯೆಂದು ಮುನಿಜನಂಗಳ್ ಪೇೞ್ವ ಶುಭ ಸ್ವಪ್ನಫಲಂಗಳೊಡನೊಡನೆ ಗರ್ಭಚಿಹ್ನಂಗಳುಂ ತೋರೆ ಪಗೆವರ ಪೆಂಡಿರ ಮೊಗಂಗಳುಮಾಕೆಯ ಕುಚಚೂಚುಕಂಗಳುಮೊಡನೊಡನೆ ಕಂದಿದುವಾಕೆಯ ವಳಿತ್ರಯಂಗಳುಂ ಪಗೆವರ ಶಕ್ತಿತ್ರಯಂಗಳುಮೊಡನೊಡನೆ ಕೆಟ್ಟುವಾಕೆಯ ಬಾಸೆಗಳುಂ ಪಗೆವರ ಬಾೞ್ವಾಸೆಗಳುಮೊಡನೊಡನಸಿಯವಾದುವಾಕೆಯ ಮಂದಗಮನಮುಂ ಪಗೆವರ ಮನಂಗಳುಮೊಡನೊಡನಲಸಿಕೆಯ ಕೈಕೊಂಡುವಾಕೆಯ ನಡುವಿನ ಬಡತನಮುಂ ಪಗೆವರ ಸಿರಿಯುಮೊಡನೊಡನೆ ಕೆಟ್ಟುವಾ ಸಮಯದೊಳ್

ಉತ್ಪಲಮಾಲೆ

ಉರ್ಚಿದ ಬಾಳೊಳಾತ್ಮ ಮುಖಬಿಂಬಮನೞ್ತಿಯೆ ನೋಡಲುಂ ಮನಂಪೆರ್ಚಿ ಧನುರ್ಲತಾ ಗುಣ ನಿನಾದಮನಾಲಿಸಿ ಕೇಳಲುಂ ಮನಂಬೆರ್ಚದೆ ಸಿಂಹ ಪೋತಕಮನೋವಲುಮಾಕೆಯ ದೋಹಳಂ ಕರಂಪೆರ್ಚಿದುದಾ ಗುಣಾರ್ಣವನ ಮುಂದಣ ಬೀರಮನಂದೆ ತೋರ್ಪವೋಲ್

ವಚನ

ಮತ್ತಮೇೞುಂ ಸಮುದ್ರಂಗಳ ನೀರನೊಂದುಮಾಡಿ ಮೀಯಲುಂ ವೇಳಾ ವನ ಲತಾಗೃಹೋದರ ಪುಳಿನಸ್ಥಳ ಪರಿಸರಪ್ರದೇಶ ದೊಳ್ ತೊೞಲಲುಮೞ್ತಿಯಾಗೆ-

ಕಂದ

ಬಳೆದ ನಿತಂಬದೆ ಕಾಂಚೀಕಳಾಪಮಂ ಕಟ್ಟಲಣಮೆ ನೆರೆಯದಿದೆಂದಗ್ಗಳಿಸಿ ಕುಳಿಕೆಗಳಿನೇಂ ಕಣ್ಗೊಳಿಸಿದುದೋ ಸುಭಗೆಯಾದ ಸುದತಿಯ ಗರ್ಭಂ

ವಚನ

ಅಂತು ತೆಕ್ಕನೆ ತೀವಿದ ಮೆಯ್ಯೊಳಲರ್ದ ಸಂಪಗೆಯರಲಂತೆ ಬೆಳರ್ತ ಬಣ್ಣಂ ಗುಣಾರ್ಣವಂಗೆ ಮಾಡಿದ ಬಣ್ಣದಂತೆ ಸೊಗಯಿಸಿ ಬೆಳೆದು-

ಕಂದ

ತುಡುಗೆಗಳೊಳ್ ಸರಿಗೆಯುಮಂಕಡುವಿಣ್ಣಿತ್ತೆನಿಸಿ ನಡೆದುಮೋರಡಿಯನಣಂನಡೆಯಲುಮಾಱದೆ ಕೆಮ್ಮನೆಬಿಡದಾರಯ್ವನಿತುಮಾಗೆ ಬಳೆದುದು ಗರ್ಭಂ

ವಚನ

ಅಂತಾ ಬಳೆದ ಗರ್ಭದೊಳ್ ಸಂಪೂರ್ಣಪ್ರಸವಸಮಯಂ ದೊರೆಕೊಳೆ ಗ್ರಹಂಗಳೆಲ್ಲಂ ತಂತಮ್ಮುಚ್ಚ ಸ್ಥಾನಂಗಳೊಳಿರ್ದು ಷಡ್ವರ್ಗ ಸಿದ್ಧಿಯನುಂಟುಮಾಡೆ ಶುಭಲಗ್ನೋದಯದೊಳ್-

ಕಂದ

ಭರತಕುಲ ಗಗನ ದಿನಕರನರಾತಿಕುಳಕಮಳಹಿಮಕರಂ ಶಿಶು ತೇಜೋವಿರಚನೆಯುಂ ಕಾಂತಿಯುಮಾವರಿಸಿರೆ ಗರ್ಭೋದಯಾದ್ರಿಯಿಂದುದಯಿಸಿದಂ

ಕಂದ

ಉದಯಿಸುವುದುಮಮೃತಾಂಶುವಿನುದಯದೊಳಂಭೋಧಿ ವೇಲೆ ಭೋರ್ಗರೆವವೊಲೊರ್ಮೊದಲೆಸೆದುವು ಘನಪಥದೊಳ್ತ್ರಿದಶಕರಾಹತಿಯಿನೊಡನೆ ಸುರದುಂದುಭಿಗಳ್

ವಚನ

ಅಂತು ಮೊೞಗುವ ಸುರದುಂದುಭಿಗಳುಂ ಪರಸುವ ಜಯಜಯ ಧ್ವನಿಗಳುಂ ಬೆರಸು ದೇವೇಂದ್ರಂ ಬರೆ ದೇವವಿಮಾನಂಗಳೆಲ್ಲಂ ಶತಶೃಂಗಪರ್ವತಮಂ ಮುಸುಱಿಕೊಂಡು-

ಕಂದ

ದೇವರ ಪಗಳ ರವದೊಳ್ದೇವರ ಸುರಿವರಲ ಸರಿಯ ಬೆಳ್ಸರಿಯೊಳ್ ತದ್ದೇವ ವಿಮಾನಾವಳಿಯೊಳ್ತೀವಿದುದೊರ್ಮೊದಲೆ ಗಗನದಿಂ ಧರೆ ಮಧ್ಯಂ

ವಚನ

ಅಂತು ಹಿರಣ್ಯಗರ್ಭಬ್ರಹ್ಮಂ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜಾಗಸ್ತ್ಯ ಪುಲಸ್ತ್ಯ ನಾರದ ಪ್ರಮುಖರಪ್ಪ ದಿವ್ಯಮುನಿಪತಿಗಳುಮೇಕಾದಶರುದ್ರರುಂ ದ್ವಾದಶಾದಿತ್ಯರುಮಷ್ಟವಸುಗಳುಮಶ್ವಿನೀ ದೇವರುಂ ಮೊದಲಾಗೆ ಮೂವತ್ತಮೂದೇವರುಂ ಇಂದ್ರಂಬೆರಸು ವೈಮಾನಿಕ ದೇವರುಂ ನೆರೆದು ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನ್ಮೋತ್ಸವಮಂ ಮಾಡಿ-

ಕಂದ

ನೋಡುವನಾ ಬ್ರಹ್ಮಂ ಮುಂಡಾಡುವನಮರೇಂದ್ರನಿಂದ್ರನಚ್ಚರಸೆಯರೆೞ್ದಾಡುವರೆಂದೊಡೆ ಪೊಗೞಲ್ಕೇವೇಡ ಗುಣಾರ್ಣವನ ಜನ್ಮದಿನದ ಬೆಡಂಗಂ

ವಚನ

ಅಂತು ಪಿರಿದುಮೊಸಗೆಯಂ ಮಾಡಿ ದೇವಸಭೆಯುಂ ಬ್ರಹ್ಮಸಭೆಯುಮೊಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳೊಳಿತಂ ಸಕಲ ಭುವನ ಸಂಸ್ತೂಯಮಾನಂ ಚಾಳುಕ್ಯವಂಶೋದ್ಭವಂ ಶ್ರೀಮದರಿಕೇಸರಿ ವಿಕ್ರಮಾರ್ಜುನನುದಾತ್ತನಾರಾಯಣಂ ಪ್ರಚಂಡ ಮಾರ್ತಾಂಡನುದಾರಮಹೇಶ್ವರಂ ಕದನತ್ರಿಣೇತ್ರಂ ಮನುಜ ಮಾಂಧಾತಂ ಪ್ರತಿಜ್ಞಾ ಗಾಂಗೇಯಂ ಶೌಚಾಂಜನೇಯನಕಳಂಕರಾಮಂ ಸಾಹಸಭೀಮಂ ಪ್ರತ್ಯಕ್ಷಜೀಮೂತವಾಹನಂ ಜಗದೇಕಮಲ್ಲಂ ಪರಸೈನ್ಯ ಭೈರವಂ ಅತಿರಥ ಮಥನಂ ವೈರಿಗಜಘಟಾವಿಘಟನಂ ವಿದ್ವಿಷ್ಟ ವಿದ್ರಾವಣನರಾತಿ ಕಾಳಾನಳಂ ರಿಪುಕುರಂಗಕಂಠೀರವಂ ವಿಕ್ರಾಂತತುಂಗಂ ಪರಾಕ್ರಮಧವಳಂ ಸಮರೈಕಮೇರು ಶರಣಾಗತ

ಉತ್ಪಲಮಾಲೆ

ಸಪ್ತ ಸಮುದ್ರ ಮುದ್ರಿತ ಧರಾತಳಮಂ ಬೆಸಕೆಯ್ಸು ಮೀಱಿದುದ್ವೃಪ್ತ ವಿರೋಧಿ ಸಾಧನಮನಾಹವದೊಳ್ ತಱದೊಟ್ಟು ವಿಶ್ವದಿಗ್ವ್ಯಾಪ್ತ ಯಶೋವಿಳಾಸಿನಿಗೆ ವಲ್ಲಭನಾಗು ನಿರಂತರ ಸುಖವ್ಯಾಪ್ತಿಗೆ ನೀನೆ ಮೊತ್ತಮೊದಲಾಗರಿಕೇಸರಿ ಲೋಕಮುಳ್ಳಿನಂ

॥ ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ಪ್ರಥಮಾಶ್ವಾಸಂ ॥